ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ಪ್ರಾಣಿಗಳು? ಚಿರತೆ, ನಾಯಿ, ಬೆಕ್ಕುಗಳಾ?
Rashtrapati Bhavan mysterious animals viral video: ಜೂನ್ 9ರಂದು ಮೋದಿ ಪ್ರಮಾಣವಚನ ಸಮಾರಂಭದ ವೇಳೆ ಕೆಲ ಸಂಸದರು ಸಂಪುಟ ಸದಸ್ಯರಾಗಿ ಪ್ರಮಾಣವಚನ ಪಡೆಯುತ್ತಿದ್ದಾಗ ಹಿನ್ನೆಲೆಯಲ್ಲಿ ನಿಗೂಢ ಪ್ರಾಣಿಗಳು ಓಡಾಡುತ್ತಿರುವ ದೃಶ್ಯ ನೆಟ್ಟಿಗರನ್ನು ಸೋಜಿಗರನ್ನಾಗಿಸಿದೆ. ಕೆಲ ವಿಡಿಯೋಗಳು ವೈರಲ್ ಆಗಿದೆ. ಅದರಲ್ಲೂ ದುರ್ಗಾ ದಾಸ್ ಪ್ರಮಾಣ ವಚನ ಸ್ವೀಕರಿಸಿ ಏಳುತ್ತಿದ್ದಾಗ ತುಸು ಹಿಂಭಾಗದಲ್ಲಿ ದೊಡ್ಡ ಬೆಕ್ಕಿನಂಥ ಪ್ರಾಣಿಗಳು ಓಡಾಡುತ್ತಿದ್ದುದು ಕಂಡು ಬಂದಿದೆ. ಎಎನ್ಐ ಪೋಸ್ಟ್ ಮಾಡಿರುವ ಅಜಯ್ ತಮಟಾ ಎಂಬುವವರ ವಿಡಿಯೋದಲ್ಲೂ ಈ ಪ್ರಾಣಿಗಳು ಕಾಣಿಸಿರುವುದು ಕುತೂಹಲ ಮೂಡಿಸಿದೆ.
ನವದೆಹಲಿ, ಜೂನ್ 10: ನಿನ್ನೆ ಭಾನುವಾರ ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆದ ಹೊಸ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭದಲ್ಲಿನ ಕೆಲ ವಿಡಿಯೋಗಳು ವಿಭಿನ್ನ ಕಾರಣಕ್ಕೆ ಸುದ್ದಿ ಮಾಡುತ್ತಿವೆ. ಕೆಲ ವಿಡಿಯೋಗಳಲ್ಲಿ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ಹಿಂಭಾಗ ತುಸು ದೂರದಲ್ಲಿ ದೊಡ್ಡ ನಾಯಿ ಅಥವಾ ಬೆಕ್ಕಿನಂಥ (big cats or dogs) ಪ್ರಾಣಿಗಳು ಅಡ್ಡಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋಗಳು ಗಮನ ಸೆಳೆಯುತ್ತಿವೆ. ಬಿಜೆಪಿ ಸಂಸದ ದುರ್ಗಾ ದಾಸ್ (Durga das oath taking) ಅವರು ಪ್ರಮಾಣವಚನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ಹೇಳಲು ಎದ್ದು ಹೋಗುವಾಗ ಹಿನ್ನೆಲೆಯಲ್ಲಿ ಎರಡು ಪ್ರಾಣಿಗಳು ನಿಧಾನವಾಗಿ ಹೋಗುತ್ತಿದ್ದುದು ಕಾಣಿಸಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಬಹಳಷ್ಟು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಅದರಲ್ಲಿರುವ ಪ್ರಾಣಿ ಯಾವುದು ಎಂಬುದು ಮಾತ್ರ ಗೊಂದಲವಾಗಿಯೇ ಉಳಿದಿದೆ. ಕೆಲವರು ಇದು ಚಿರತೆ ಎಂದು ಬಣ್ಣಿಸಿದ್ದಾರೆ. ಕೆಲವರು ಇದು ವೈಲ್ಡ್ ಕ್ಯಾಟ್ ಅಥವಾ ಕಾಡಿನ ಬೆಕ್ಕಿರಬಹುದು ಎಂದಿದ್ದಾರೆ. ಇನ್ನೂ ಕೆಲವರು ಇದು ದೊಡ್ಡ ಗಾತ್ರದ ಬೆಕ್ಕು ಅಥವಾ ಸೆಕ್ಯೂರಿಟಿ ನಾಯಿ ಇರಬಹುದು ಎಂದು ಅಂದಾಜಿಸಿದ್ದಾರೆ.
Is that a wild animal in the background, strolling in the Rashtrapati Bhawan? pic.twitter.com/OPIHm40RhV
— We, the people of India (@India_Policy) June 10, 2024
ಮತ್ತೂ ಕೆಲವರು ಇದು ಎಡಿಟೆಡ್ ವಿಡಿಯೋ ಆಗಿದ್ದಿರಬಹುದು. ರಾಷ್ಟ್ರಪತಿ ಭವನದಲ್ಲಿ ವನ್ಯಜೀವಿಗಳು ಯಾಕೆ ಬರುತ್ತವೆ ಎಂದು ಕೇಳಿದ್ದಾರೆ. ಆದರೆ, ಈ ಒಂದು ವಿಡಿಯೋ ಎಐನಿಂದ ಎಡಿಟೆಡ್ ಆಗಿದ್ದಿರಬಹುದು ಎಂದುಕೊಳ್ಳಬಹುದು. ಆದರೆ, ಎಎನ್ಐ ಸುದ್ದಿಸಂಸ್ಥೆ ಹಾಕಿರುವ ಒಂದು ವಿಡಿಯೋದಲ್ಲಿ ಈ ಪ್ರಾಣಿಗಳು ಕಾಣಿಸಿವೆ. ಅಜಯ್ ತಮಟಾ ಅವರು ಪ್ರಮಾಣವಚನ ಸ್ವೀಕರಿಸುವ ವಿಡಿಯೋದಲ್ಲಿ ನಿಗೂಢ ಪ್ರಾಣಿ ನಡೆದಾಡುತ್ತಿರುವುದು ಕಾಣಿಸಿದೆ. ಆದ್ದರಿಂದ ವೈರಲ್ ಆಗಿರುವ ವಿಡಿಯೋ ಎಡಿಟ್ ಆಗಿದೆ ಎನ್ನುವುದನ್ನು ಸುಲಭವಾಗಿ ತಳ್ಳಿಹಾಕಬಹುದು.
#WATCH | BJP leader Ajay Tamta sworn-in as Union Minister in the Prime Minister Narendra Modi-led NDA government pic.twitter.com/wSlwdotPyI
— ANI (@ANI) June 9, 2024
ಇದನ್ನೂ ಓದಿ: ‘ಕಾಶ್ಮೀರಕ್ಕೆ ಪಾಕಿಸ್ತಾನಿ ಉಗ್ರರು ಪ್ರವೇಶಿಸಲು ಬಿಡಬೇಡಿ’; ಭಾರತಕ್ಕೆ ಫೈರ್‌ಬ್ರಾಂಡ್ ಡಚ್ ನಾಯಕ ವೈಲ್ಡರ್ಸ್ ಸಂದೇಶ
ಹಾಗಿದ್ದರೆ, ಜನರ ನಿಯಂತ್ರಣ ಇಲ್ಲದೇ ಅಡ್ಡಾಡುತ್ತಿರುವ ಆ ಪ್ರಾಣಿಗಳು ಯಾವುವು ಎಂಬುದು ಮಾತ್ರ ನಿಗೂಢವಾಗಿಯೇ ಇದೆ. ರಾಷ್ಟ್ರಪತಿ ಭವನದಿಂದಲೂ ಈ ಬಗ್ಗೆ ಯಾವ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಬಂದಿಲ್ಲ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ