ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಪತ್ತೆಯಾದ ಬಳಿಕ ಜನರ ಜೀವನ ಶೈಲಿ ಊಹೆಗೂ ಅಸಾಧ್ಯ ಎಂಬಷ್ಟು ಬದಲಾವಣೆ ಕಂಡಿದೆ. ಹಲವು ಮಂದಿ ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಎನಿವೇರ್ ಸಂಸ್ಕೃತಿಗೆ ಹೊಂದಿಕೊಂಡಿದ್ದಾರೆ. ಮನೆಯಲ್ಲೇ ಕೆಲಸ ಮಾಡುವುದು ಕೆಲವು ಕಾರಣಗಳಿಂದ ಹಲವು ಅನುಕೂಲ ಅನಿಸಿದ್ದರೂ ಇನ್ನು ಕೆಲವು ಕಾರಣಗಳಿಂದ ಸಮಸ್ಯೆ ಅನಿಸಿದೆ. ಕೆಲಸಗಾರರು ತಮ್ಮ ಕೆಲಸದ ಅವಧಿ ಮುಕ್ತಾಯಗೊಂಡರೂ ಕಂಪೆನಿಗಾಗಿ ದುಡಿಯಬೇಕಾಗಿ ಬರುವುದು ಅಂತಹ ಸಮಸ್ಯೆಗಳಲ್ಲಿ ಒಂದು. ಕೆಲಸದ ಅವಧಿ ವಿಸ್ತರಣೆ ಆಗುವುದು ದೊಡ್ಡ ಅಡಚಣೆಯಾಗಿ ಕಂಡಿದೆ. ಲಾಗ ಆಫ್ ಆದ ಬಳಿಕವೂ ಮ್ಯಾನೇಜರ್ ತಲೆ ತಿಂತಾರೆ ಅನ್ನೋದು ಹಲವರ ಅಳಲು. ಇದರಿಂದಾಗಿ ಸುಸ್ತು, ಒತ್ತಡ, ಆಯಾಸ ಕೆಲಸಗಾರರಲ್ಲಿ ಅಧಿಕವಾಗಿದೆ. ಈ ಪರಿಸ್ಥಿತಿಯನ್ನು ಸರಿದೂಗಿಸಲು ಬೆಲ್ಜಿಯಂನಲ್ಲಿ ಹೊಸ ನಿಯಮ ಒಂದನ್ನು ತರಲಾಗಿದೆ.
ಬೆಲ್ಜಿಯಂನ ಸರ್ಕಾರಿ ಕೆಲಸಗಾರರು ತಮ್ಮ ಕೆಲಸದ ಅವಧಿ ಮುಕ್ತಾಯ ಆದ ಬಳಿಕ ಬಾಸ್ ಕೆಲಸ ಮಾಡಲು ಹೇಳಿದರೆ ಅದನ್ನು ಕಡೆಗಣಿಸಬಹುದಾಗಿದೆ. ಕೆಲಸದ ಸಮಯದ ನಂತರ ಸ್ವತಃ ಬಾಸ್ ಕೆಲಸ ಹೇಳಿದರೂ ಅದನ್ನು ಮಾಡದೇ ಉಳಿಯಬಹುದು. ಅತಿಯಾದ ಕೆಲಸದ ಒತ್ತಡವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುವ ಕಾರಣದಿಂದ ಈ ನಿಯಮಾವಳಿ ಪರಿಚಯಿಸಲಾಗಿದೆ.
ಈ ಪ್ರಕ್ರಿಯೆಗೆ ರೈಟ್ ಟು ಡಿಸ್ಕನೆಕ್ಟ್ ಎಂದು ಹೆಸರಿಡಲಾಗಿದೆ. ಫೆಬ್ರವರಿ 1ನೇ ತಾರೀಖಿನಿಂದ ಈ ನಿಯಮ ಕೆಲಸಗಾರರಿಗೆ ಅನ್ವಯ ಆಗಲಿದೆ. ಈ ಬಗ್ಗೆ ಸಿವಿಲ್ ಸರ್ವೀಸ್ ಮಿನಿಸ್ಟರ್ ಪೆಟ್ರಾ ಡೆ ಸಟ್ಟರ್ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ನಿಗದಿತ ಕೆಲಸವನ್ನು ಮಾಡಲು ಮುಂದಿನ ಕೆಲಸದ ಅವಧಿಯ ವರೆಗೆ ಕಾಯಲು ಆಗದೇ ಇರುವ ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಕೆಲಸಗಾರರನ್ನು ಹೆಚ್ಚಿನ ಅವಧಿ ಕೆಲಸ ಮಾಡುವಂತೆ ಕೇಳಿ ಸಂಪರ್ಕಿಸಬಹುದಾಗಿದೆ. ಈ ಹೊಸ ನಿಯಮವು ಕೆಲಸಗಾರರಿಗೆ ಉತ್ತಮ ಕೆಲಸ ಮಾಡುವಂತೆ ಮತ್ತು ಅವರ ಚೈತನ್ಯ ಉಳಿಸುವಂತೆ ನೋಡಿಕೊಳ್ಳುವ ಉದ್ದೇಶದಿಂದ ಮಾಡಲಾಗಿದೆ. ಈ ನಿಯಮ ಮುರಿದರೆ ಏನು ಶಿಕ್ಷೆ ಎಂಬ ಬಗ್ಗೆ ಉಲ್ಲೇಖ ಮಾಡಿಲ್ಲ.
ಈ ಮೊದಲು ಪೋರ್ಚುಗಲ್ ಸರ್ಕಾರ ಇದೇ ರೀತಿಯ ನಿಯಮ ಒಂದನ್ನು ಪರಿಚಯಿಸಿತ್ತು. ಅದರಂತೆ ಟೀಮ್ ಬಾಸ್ಗಳು ಹಾಗೂ ಕೆಲಸಗಾರರು ಕೆಲಸದ ಅವಧಿಯ ನಂತರ ಮೆಸೇಜ್ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಒಂದು ವೇಳೆ ಕೆಲಸದ ಅವಧಿಯ ನಂತರ ಕೆಲಸಗಾರರನ್ನು ಇಲ್ಲಿ ಸಂಪರ್ಕಿಸಿದರೆ ಅವರಿಗೆ ದಂಡ ವಿಧಿಸುವ ಬಗ್ಗೆಯೂ ನಿಯಮದಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: Viral Video;ಕೊರೋನಾ ವಡೆ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ
ಇದನ್ನೂ ಓದಿ: Viral Video: ಮೊಬೈಲ್ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು