ಒಂದು ಬೈಕ್, ಆರು ಜನ, ಸಕುಟುಂಬ ಸಮೇತರಾಗಿ ಮದುವೆಗೆ ಪಯಣ; ಚಾಲಕನಿಗೆ ನಡು ರಸ್ತೆಯಲ್ಲೇ ಕೈ ಮುಗಿದ ಪೊಲೀಸರು
ಒಂದೇ ಬೈಕ್ ಮೇಲೆ ಕುಟುಂಬ ಸಮೇತರಾಗಿ ಪಯಣಿಸುತ್ತಿದ್ದ ಆರು ಜನರನ್ನು ತಡೆದ ಪೊಲೀಸರು ಬೈಕ್ ಚಾಲಕನ ಕೌಶಲ್ಯ ಹಾಗೂ ಕೊರೊನಾ ಕಡೆಗಿನ ನಿರ್ಲಕ್ಷ್ಯ ಎರಡನ್ನೂ ಒಟ್ಟೊಟ್ಟಿಗೇ ಕಂಡು ಅವಕ್ಕಾಗಿದ್ದಾರೆ.
ಭಾರತದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ನಿರೀಕ್ಷೆಗೂ ಮೀರಿ ಆತಂಕ ಸೃಷ್ಟಿಸಿದೆ. ಸೋಂಕು ಹರಡುವುದನ್ನು ತಡೆಯಲಿಕ್ಕಾಗಿ ಹಲವು ರಾಜ್ಯಗಳು ಕರ್ಫ್ಯೂ, ಲಾಕ್ಡೌನ್ನಂತಹ ಕಠಿಣ ನಿಯಮಗಳ ಮೊರೆ ಹೋಗಿವೆ. ಸಭೆ, ಸಮಾರಂಭ, ಜನ ಸೇರುವ ಕಾರ್ಯಕ್ರಮಗಳೆಲ್ಲವಕ್ಕೂ ಸಾಕಷ್ಟು ನಿರ್ಬಂಧ ಹೇರಿವೆ. ಅಷ್ಟಾದರೂ ಜನರು ಮಾತ್ರ ಏನಾದರೊಂದು ನೆಪ ಹೂಡಿ ಅಡ್ಡಾಡುವುದನ್ನು ಬಿಟ್ಟಿಲ್ಲ. ಹೀಗೆ ತಿರುಗಾಡುವವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಕೆಲವೊಮ್ಮೆ ತಾಳ್ಮೆ ಮೀರಿ ಬಲಪ್ರಯೋಗ ಮಾಡುವ ಹಂತಕ್ಕೂ ತಲುಪಿದ್ದಾರೆ. ಇನ್ನು ಕೆಲವೊಮ್ಮೆ ದಂಡ ಪ್ರಯೋಗ, ಲಾಠಿ ಪ್ರಯೋಗ, ಬೈಗುಳ ಇವೆಲ್ಲವನ್ನೂ ಬದಿಗಿಟ್ಟು ತಾವೇ ಜನರಿಗೆ ಶರಣಾಗಿ ಮನವಿ ಮಾಡಿದ್ದೂ ಇದೆ. ಕಳೆದ ಬಾರಿಯಿಂದಲೂ ಇಂತಹ ಹಲವು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಇದೀಗ ಹರಿದಾಡುತ್ತಿರುವ ದೃಶ್ಯವೊಂದು ಜನರು ಕೊರೊನಾ ಎರಡನೇ ಅಲೆ ಬಗ್ಗೆ ಎಷ್ಟು ನಿರ್ಲಕ್ಷಿತರಾಗಿದ್ದಾರೆ ಎಂದು ತೋರಿಸುವುದಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಚತ್ತೀಸ್ಗಡ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಿಪಾಂಶು ಕಬ್ರಾ ಈ ಫೋಟೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಬೈಕ್ ಮೇಲೆ ಕುಟುಂಬ ಸಮೇತರಾಗಿ ಪಯಣಿಸುತ್ತಿದ್ದ ಆರು ಜನರನ್ನು ತಡೆದ ಪೊಲೀಸರು ಬೈಕ್ ಚಾಲಕನ ಕೌಶಲ್ಯ ಹಾಗೂ ಕೊರೊನಾ ಕಡೆಗಿನ ನಿರ್ಲಕ್ಷ್ಯ ಎರಡನ್ನೂ ಒಟ್ಟೊಟ್ಟಿಗೇ ಕಂಡು ಅವಕ್ಕಾಗಿದ್ದಾರೆ. ಕೊರೊನಾ 2ನೇ ಅಲೆಯ ನಡುವೆಯೂ ದ್ವಿಚಕ್ರ ವಾಹನವನ್ನೇರಿ ಪರಿವಾರ ಸಮೇತ ಹೊರಟಿದ್ದಕ್ಕೆ ಕಾರಣ ಕೇಳಿದಾಗ ಆ ವ್ಯಕ್ತಿ ಮದುವೆ ಸಮಾರಂಭಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
शादी में जाना था, मास्क लगाया और #RoadSafety को ठेंगा.?… घर के मुखिया ही अपनों की सुरक्षा में ऐसी सेंधमारी कर रहे हैं.
पुलिस समझाकर चालान काट सकती है पर आपकी लापरवाही अपनों की Lifeline काट देगी…
गूना की घटना.
PC – @brajeshabpnews pic.twitter.com/4RwX6RKaqM
— Dipanshu Kabra (@ipskabra) May 4, 2021
ಇದನ್ನು ಕೇಳಿ ದಂಗಾದ ಪೊಲೀಸರು ಬೈಕ್ ಮುಂದೆ ನಿಂತು ಕೈ ಮುಗಿದು ಹೀಗೆ ಮಾಡದಂತೆ ವಿನಂತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಕ್ಕಳು ಸೇರಿದಂತೆ ಆರು ಜನರೂ ಬೈಕ್ ಮೇಲೆ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಪೊಲೀಸರು ಸುತ್ತಲೂ ನಿಂತು ಕೈ ಮುಗಿದಿರುವ ದೃಶ್ಯವೂ ಸೆರೆಯಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ದಿಪಾಂಶು ಕಬ್ರಾ, ಮದುವೆಗೆ ಮಾಸ್ಕ್ ಹಾಕಿಕೊಂಡು ಹೊರಟಿದ್ದೀರಿ. ಆದರೆ, ರಸ್ತೆ ನಿಯಮವನ್ನು ಸಂಪೂರ್ಣ ಉಲ್ಲಂಘಿಸಿದ್ದೀರಿ. ಮನೆಯ ಯಜಮಾನನೇ ತನ್ನ ಪ್ರೀತಿ ಪಾತ್ರರ ಸುರಕ್ಷತೆ ಬಗ್ಗೆ ಗಮನ ಹರಿಸದೇ ಇರುವುದು ಖೇದನೀಯ. ಪೊಲೀಸರು ನಿಮಗೆ ಚಲನ್ ಕೊಡಬಹುದು. ಆದರೆ, ನಿಮ್ಮ ನಿರ್ಲಕ್ಷ್ಯತನ ನಿಮ್ಮ ಕುಟುಂಬದವರನ್ನೇ ದುಃಖಕ್ಕೆ ತಳ್ಳಬಹುದು ಎಂದು ಎಚ್ಚರಿಕೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಹುತೇಕರು ಬೈಕ್ ಚಾಲಕನ ಧೈರ್ಯವನ್ನು ಕಂಡು ಹುಬ್ಬೇರಿಸಿದ್ದಾರೆ. ಭಾರತದಲ್ಲಿ ಮಾತ್ರ ಇಂತಹ ಸಾಹಸ ಮಾಡಲು ಸಾಧ್ಯ. ಇದು ನಿಯಮ ಉಲ್ಲಂಘನೆ ಎನ್ನುವುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಎಂದು ಕಾಲೆಳೆದಿದ್ದಾರೆ. ಟ್ವಿಟರ್ನಲ್ಲಿ ಕೂಡಾ ಈ ಫೋಟೋ ಸಾಕಷ್ಟು ರೀಟ್ವೀಟ್ ಕಂಡಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ಹೂಮಾಲೆ ಬದಲಾಯಿಸಲು ಬಿದಿರಿನ ಕೋಲು ಬಳಸಿದ ದಂಪತಿ; ವೈರಲ್ ಆಯ್ತು ವಿಡಿಯೋ