ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಮುದ್ದಿನ ನಾಯಿ ಮರಿ ನೂರಿಯ ಜೊತೆಗಿನ ಪ್ರೀತಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮ್ಮನ ಫೇವರೆಟ್ ಯಾರೆಂದು ಗೊತ್ತಾಯ್ತ? ಎಂದು ರಾಹುಲ್ ಗಾಂಧಿ ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ.
ಈ ನಾಯಿ ಮರಿಯನ್ನು ರಾಹುಲ್ ಗಾಂಧಿ ಕಳೆದ ವರ್ಷ ಆಗಸ್ಟ್ನಲ್ಲಿ ಗೋವಾಗೆ ಹೋಗಿದ್ದಾಗ ಅಲ್ಲಿಂದ ತಂದಿದ್ದರು. ಈ ನಾಯಿ ಮರಿಯನ್ನು ಅಮ್ಮನಿಗೆ ರಾಹುಲ್ ಉಡುಗೊರೆಯಾಗಿ ನೀಡಿದ್ದರು. ಗೋವಾದ ಜ್ಯಾಕ್ ರಸೆಲ್ ಟೆರಿಯರ್ ತಳಿಯ ನಾಯಿ ಮರಿ ಇದಾಗಿದ್ದು, ನಾಯಿ ಸಾಕುವ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರ ಬಳಿಯಿಂದ ತೆಗೆದುಕೊಂಡು ದೆಹಲಿಯ ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದರು ರಾಹುಲ್ ಗಾಂಧಿ.
ಉತ್ತರ ಗೋವಾದ ಮಾಪುಸಾದಲ್ಲಿರುವ ನಾಯಿಯ ಕೆನಲ್‌ನಿಂದ ನಾಯಿಮರಿಯನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಅಂದಿನಿಂದ ಇದು ಗಾಂಧಿ ಕುಟುಂಬದಲ್ಲಿ ಪ್ರೀತಿಯ ಒಡನಾಡಿಯಾಗಿ ಮಾರ್ಪಟ್ಟಿದೆ. ಈ ಕುರಿತು ರಾಹುಲ್ ಗಾಂಧಿ ಯೂಟ್ಯೂಬ್ನಲ್ಲಿ ವಿಡಿಯೋವನ್ನೂ ಮಾಡಿದ್ದರು.
ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿಗೆ ಈ ನಾಯಿಯನ್ನು ಉಡುಗೊರೆಯಾಗಿ ನೀಡಿದಾಗ, ಅಸಾದುದ್ದೀನ್ ಓವೈಸಿ ಪಕ್ಷದ ಎಐಎಂಐಎಂ ನಾಯಕರೊಬ್ಬರು ರಾಹುಲ್ ಗಾಂಧಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಎಐಎಂಐಎಂ ನಾಯಕ ಮೊಹಮ್ಮದ್ ಫರ್ಹಾನ್ ನಾಯಿಗೆ ನೂರಿ ಎಂದು ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ