Viral Video: ಗಾಜಿನ ಚೂರುಗಳನ್ನು ಹಾಗೇನೇ ಕಸದ ಬುಟ್ಟಿಗೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
ಮನೆಯಲ್ಲಿ ಗಾಜಿನ ವಸ್ತುಗಳು ಒಡೆದುಹೋದ್ರೆ, ಅದನ್ನು ಹಾಗೇನೇ ತಂದು ಕಸದ ಬುಟ್ಟಿಗೆ ಅಥವಾ ಹೊರಗೆ ಕಸದ ತೊಟ್ಟಿಗೆ ಎಸೆಯುವ ಅಭ್ಯಾಸ ನಿಮಗಿದೆಯೇ? ನೀವು ಮಾಡುವ ಈ ಒಂದು ಸಣ್ಣ ತಪ್ಪಿನಿಂದ ಬಿಡಾಡಿ ಪ್ರಾಣಿಗಳ ಜೀವಕ್ಕೆ ಎಷ್ಟೆಲ್ಲಾ ತೊಂದ್ರೆಯಾಗುತ್ತೆ ಗೊತ್ತಾ? ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ.
ಸಾಮಾನ್ಯವಾಗಿ ಬೀದಿನಾಯಿಗಳು ಅಥವಾ ಇತರೆ ಯಾವುದೇ ಬಿಡಾಡಿ ಪ್ರಾಣಿಗಳು ನಗರದ ಮೂಲೆಯಲ್ಲಿ ಇರುವಂತಹ ಕಸದ ತೊಟ್ಟಿಯ ಬಳಿ ಆಹಾರವನ್ನರಸುತ್ತಾ ಬರುತ್ತವೆ. ಆ ಕಸದ ತೊಟ್ಟಿಯ ಬಳಿ ಸಿಗುವಂತಹ ಅಲ್ಪಸ್ವಲ್ಪ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತವೆ. ಹೀಗಿರುವಾಗ ನಾವೇನಾದರೂ, ಗಾಜಿನ ಚೂರು ಇತ್ಯಾದಿ ಅಪಾಯಕಾರಿ ತ್ಯಾಜ್ಯಗಳನ್ನು ಅದೇ ತೊಟ್ಟಿಗೆ ಎಸೆದರೆ, ಅದ್ರಿಂದ ಅಲ್ಲಿ ಆಹಾರವನ್ನು ತಿನ್ನಲು ಬರುವಂತಹ ಪ್ರಾಣಿಗಳಿಗೆ ಎಷ್ಟೆಲ್ಲಾ ಹಾನಿಯಾಗುತ್ತೇ ಗೊತ್ತಾ? ಈ ರೀತಿಯಾಗಿ ಕಸದ ತೊಟ್ಟಿಯಲ್ಲಿ ಎಸೆದಂತಹ ಗಾಜಿನ ಚೂರು ತಗುಳಿ ಮುಗ್ಧ ಜೀವಿಗಳ ಕಣ್ಣಿಗೆ, ಬಾಯಿಗೆ, ಮುಖಕ್ಕೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಹೀಗೆ ನೀವು ಕೂಡಾ ಒಡೆದುಹೋದ ಗಾಜಿನ ವಸ್ತುಗಳನ್ನು ಅಜಾಗರೂಕತೆಯಿಂದ ಹಾಗೇನೇ ತಂದು ಕಸದ ಬುಟ್ಟಿಗೆ ಅಥವಾ ಹೊರಗೆ ಕಸದ ತೊಟ್ಟಿಗೆ ಎಸೆಯುತ್ತಿದ್ದೀರಾ? ನೀವು ಮಾಡುವ ಈ ಒಂದು ಸಣ್ಣ ತಪ್ಪಿನಿಂದ ಬಿಡಾಡಿ ಪ್ರಾಣಿಗಳ ಜೀವಕ್ಕೆ ಎಷ್ಟೆಲ್ಲಾ ತೊಂದ್ರೆಯಾಗುತ್ತೆ ಹಾಗೂ ಇದಕ್ಕಾಗಿ ಗಾಜಿನ ಚೂರುಗಳನ್ನು ಹೇಗೆ ವಿಲೇವಾರಿ ಮಾಡಿದರೆ ಸೂಕ್ತ ಎಂಬುದನ್ನು ನೋಡಿ.
ಈ ವಿಡಿಯೋವನ್ನು ಬೆಂಗಳೂರು ಮಾಜಿ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ (Nimmabhaskar22) ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು “ನಾನು ಅಮೂಲ್ಯವಾದ ವಿಷಯವೊಂದನ್ನು ಕಲಿತಿದ್ದೇನೆ, ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ”ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಿಡಾಡಿ ಪ್ರಾಣಿಗಳ ಜೀವಕ್ಕೆ ಉಂಟಾಗುವ ಅಪಾಯವನ್ನು ತಪ್ಪಿಸಲು ಗಾಜಿನ ಚೂರುಗಳನ್ನು ಯಾವ ರೀತಿಯಾಗಿ ವಿಲೇವಾರಿ ಮಾಡಬೇಕು ಉತ್ತಮ ಸಂದೇಶವನ್ನು ನೀಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ;
I learnt something valuable, just sharing… pic.twitter.com/FRFVUlPFfP
— Bhaskar Rao (@Nimmabhaskar22) December 28, 2023
ಈ ಅರ್ಥಪೂರ್ಣವಾಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಬಿದ್ದಿದ್ದಂತಹ ಗಾಜಿನ ಚೂರುಗಳನ್ನು ತಂದು ಕಸದ ಬುಟ್ಟಿಗೆ ಹಾಕಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ ಆಕೆಯ ಗಂಡ ಬಂದು ಆ ಗಾಜಿನ ಚೂರುಗಳನ್ನೆಲ್ಲಾ ಒಂದು ಬಟ್ಟೆಯಲ್ಲಿ ಹಾಕಿ, ಅದನ್ನು ಚೆನ್ನಾಗಿ ಸುತ್ತಿ, ಅದನ್ನು ಒಂದು ಪ್ಲಾಸ್ಟಿಕ್ ಕವರ್ ಒಳಗಡೆ ಹಾಕಿ , ಆ ಕವರ್ಗೆ ಗಮ್ಟೇಪ್ ಸುತ್ತಿ, ನಂತರ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಕೊನೆಯಲ್ಲಿ ಗಾಜಿನ ಚೂರು ಸೇರಿದಂತೆ ಇತರ ಅಪಾಯಕಾರಿ ತ್ಯಾಜ್ಯಗಳನ್ನು ಹೀಗೆ ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಇದರಿಂದ ಕಸದತೊಟ್ಟಿಯ ಬಳಿ ಆಹಾರವನ್ನರಸುತ್ತಾ ಬರುವ ಮುಗ್ಧ ಪ್ರಾಣಿಗಳ ಜೀವಕ್ಕೆ ಎಷ್ಟೆಲ್ಲಾ ಹಾನಿಯಾಗುತ್ತೆ ನೋಡಿ ಎಂಬ ಉತ್ತಮ ಸಂದೇಶವನ್ನು ನೀಡಲಾಗಿದೆ.
ಇದನ್ನೂ ಓದಿ: ಮಕ್ಳು ಮಾತ್ರೆ ಕುಡಿಯಲ್ಲ ಅಂತ ಹಠ ಮಾಡಿದ್ರೆ ಹೀಗೆ ಮಾಡಿ, ಇದು ಒಳ್ಳೆಯ ಐಡಿಯಾ
ಡಿಸೆಂಬರ್ 23ರಂದು ಹಂಚಿಕೊಳ್ಳಲಾದ ಈ ವಿಡಿಯೋ 26 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಒಂದೊಳ್ಳೆ ಸಂದೇಶʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಉತ್ತಮ ಸಂದೇಶವಿರುವ ವಿಡಿಯೋವನ್ನು ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು. ಹಸಿ ಕಸ, ಒಣ ಕಸ ಮತ್ತು ಗಾಜಿನ ಚೂರುಗಳಂತಹ ಅಪಾಯಕಾರಿ ತ್ಯಾಜ್ಯಗಳ ವಿಲೇವಾರಿಗಾಗಿ ಬೇರೆ ಬೇರೆಯಾದ ಕಸದ ತೊಟ್ಟಿಗಳನ್ನು ನಿರ್ಮಿಸಿದರೆ ಉತ್ತಮʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ಉತ್ತಮ ಸಂದೇಶ, ನಾವೆಲ್ಲರೂ ಇದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: