ಸರ್ವಪಲ್ಲಿ ರಾಧಾಕೃಷ್ಣನ್ರ(Sarvepalli Radhakrishnan) ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯಾಗಿ(Teachers Day) ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ನವರು ಸೆಪ್ಟೆಂಬರ್ 05, 1888ರಲ್ಲಿ ಜನಿಸಿದರು. ಭಾರತದ 2ನೆಯ ರಾಷ್ಟ್ರಪತಿಗಳಾಗಿದ್ದರು ಹಾಗೂ ಒಬ್ಬ ಹೆಸರಾಂತ ಶಿಕ್ಷಣತಜ್ಞರಾಗಿದ್ದರು. ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 05 ರಂದು ಆಚರಿಸಲಾಗುತ್ತದೆ. ಆದರೆ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ 05 ರಂದು ಆಚರಿಸುತ್ತಾರೆ.
ಈ ದಿನದ ಪ್ರಮುಖ ಘಟನೆಗಳು
ಎಂ.ವೆಂಕಟಕೃಷ್ಣಯ್ಯನವರು 1844 ಸಪ್ಟಂಬರ 05 ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ‘ಪತ್ರಿಕೋದ್ಯಮ ಪಿತಾಮಹ’ರೆಂಬ ಬಿರುದು. ವಿದ್ಯಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಿಂದ ‘ತಾತಯ್ಯ’ ಎಂಬ ನಾಮಾಂಕಿತ, ಬಡ – ಬಗ್ಗರ ಸೇವೆಯನ್ನು ತೆಗೆದುಕೊಂಡರೆ ‘ದಯಾಸಾಗರ’ ಎಂಬ ಹಿರಿಮೆ. ಗಾಂಧಿಯವರಿಂದ ‘ಭೀಷ್ಮಾಚಾರ್ಯ’ ಎಂಬ ಪ್ರಶಂಸೆ. ‘ಜನ ಸೇವೆಯೇ ಜನಾರ್ಧನ ಸೇವೆ’ ಎಂದು ನುಡಿದುದನ್ನು ನಡೆಯಲ್ಲಿ ತೋರಿಸಿ ತಮ್ಮ ಹೆಸರನ್ನು ಮನೆಯ ಮಾತನ್ನಾಗಿ ಮಾಡಿ ಮಹತ್ವಪೂರ್ಣ, ಚಿರಸ್ಮರಣೀಯವಾದ ಜೀವನವನ್ನು ನಡೆಸಿದವರು.
ಸಾಧ್ವಿ, ಸಂಪದಭ್ಯುದಯ, ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಗ್ರಾಮಜೀವನ, ವಿದ್ಯಾದಾಯಿನಿ, ಪೌರ ಸಾಮಾಜಿಕ ಪತ್ರಿಕೆ ಮೊದಲಾದ ಕನ್ನಡ ಪತ್ರಿಕೆಗಳನ್ನಲ್ಲದೆ, ನೇಚರ್ ಕ್ಯೂರ್, ಮೈಸೂರ್ ಪೇಟ್ರಿಯಾಟ್, ವೆಲ್ಥ ಆಫ್ ಮೈಸೂರ್ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಸಹ ಹಲವು ವರ್ಷ ನಡೆಯಿಸುತ್ತಿದ್ದರು. ಪತ್ರಿಕೋದ್ಯಮವು ವಿಶ್ವವಿದ್ಯಾನಿಲಯದಲ್ಲಿ ಪಠ್ಯಪುಸ್ತಕವಾಗಲೆಂಬ ಉದ್ದೇಶದಿಂದ, 2000 ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿ, ಪತ್ರಿಕೋದ್ಯಮದ ಶ್ರೇಷ್ಠ ವಿದ್ಯಾರ್ಥಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದರು.
Published On - 7:00 pm, Mon, 5 September 22