Viral News: ‘ಶಾರ್ಕ್ ರೈಡರ್’ ಎಂದು ಸ್ವನಾಮಕರಣ ಮಾಡಿಕೊಂಡಿದ್ದ ವ್ಯಕ್ತಿಗೆ ಕಚ್ಚಿದ ಶಾರ್ಕ್!
Australia: ಆಸ್ಟ್ರೇಲಿಯಾದ ಕಡಲಲ್ಲಿ ಶಾರ್ಕ್ ರೈಡರ್ ಎಂದು ಅಡ್ಡ ಹೆಸರಿಟ್ಟುಕೊಂಡಿದ್ದವನಿಗೆ ಶಾರ್ಕ್ ದಾಳಿ ಮಾಡಿದೆ. ಪ್ರಾಣಾಪಾಯದಿಂದ ಆತ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೆಲವರು ಹಾಗೆಯೇ. ತಮ್ಮಿಚ್ಛೆಯ, ತಾವು ಪಳಗಿರುವ ಕ್ಷೇತ್ರದ ಹೆಸರನ್ನು ತಾವೇ ಸ್ವತಃ ನಾಮಕರಣ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅದೇ ಅವರನ್ನು ಫಜೀತಿಗೂ ಸಿಲುಕಿಸುತ್ತಿವೆ. ಅಂಥದ್ದೇ ಒಂದು ಪ್ರಕರಣ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ. ತನ್ನ ಹೆಸರನ್ನು ‘ಶಾರ್ಕ್ ರೈಡರ್’ ಎಂದು ಸ್ವನಾಮಕರಣ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಶಾರ್ಕ್ ಕಚ್ಚಿದ್ದು ಗಂಭೀರವಾಗಿ ಗಾಯಗಳಾಗಿವೆ. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರಾ ಸಮುದ್ರ ತೀರದಲ್ಲಿ ಘಟನೆ ನಡೆದಿದ್ದು, ದಾಳಿಗೆ ಒಳಗಾದ ‘ಶಾರ್ಕ್ ರೈಡರ್’ನ ಮೂಲ ಹೆಸರು ಆರನ್ ಮೊಯರ್ ಎಂದು ಗುರುತಿಸಲಾಗಿದೆ. ಈಗ ಮೊಯರ್ ಚೇತರಿಕೆ ಕಾಣುತ್ತಿದ್ದು, ಶಾರ್ಕ್ ಕಚ್ಚಿದ ಮೂರು ಗುರುತುಗಳು ಕಾಣಿಸುತ್ತಿವೆ ಎಂದು ವರದಿಯಾಗಿದೆ.
32 ವರ್ಷದ ಆರನ್ ಮೊಯರ್ ಅವರಿಗೆ ಶಾರ್ಕ್ ದಾಳಿ ಮಾಡಿದ ಕಾರಣ ತಿಳಿದುಬಂದಿಲ್ಲ. ಆದರೆ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಮೊಯರ್ ವರನಸ್ ದ್ವೀಪದಲ್ಲಿ ಮೀನು ಹಿಡಿಯುತ್ತಿದ್ದಾಗ ಶಾರ್ಕ್ ದಾಳಿ ಮಾಡಿದ್ದು, ಕಾಲು, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಕಚ್ಚಿದೆ. ಅಲ್ಲಿಂದ ಅವರನ್ನು ಸುಮಾರು 15 ಗಂಟೆಗಳ ಕಾಲ ಬೋಟಿನಲ್ಲಿ ಪ್ರಯಾಣಿಸಿ ಭೂಪ್ರದೇಶಕ್ಕೆ ಕರೆದುಕೊಂಡು ಬಂದು ಸ್ಥಳೀಯ ಮೀನುಗಾರರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ಆಕಾಶಮಾರ್ಗವಾಗಿ ‘ರಾಯಲ್ ಪರ್ತ್ ಆಸ್ಪತ್ರೆ’ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು 9ನ್ಯೂಸ್ ವರದಿ ಮಾಡಿದೆ.
ಆಸ್ಟ್ರೇಲಿಯಾದ ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಕುರಿತು ಹೇಳಿಕೆ ನೀಡಿದ್ದು ಮೊಯರ್ ಅವರಿಗೆ ದಾಳಿ ಮಾಡಿದ್ದು ಬಹುಶಃ ಲೆಮನ್ ಶಾರ್ಕ್. ಆದರೆ ತಜ್ಞರ ಪ್ರಕಾರ ಅವು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂದಿದೆ. ಮೊಯರ್ ಅವರಿಗೆ ಶಾರ್ಕ್ ರೈಡರ್ ಎಂಬ ಅಡ್ಡ ಹೆಸರು ಬಂದಿದ್ದು 2014ರಲ್ಲಿ. ಮೊಯರ್ ಹ್ಯಾಮರ್ಹೆಡ್ ಶಾರ್ಕ್ ಮೇಲೆ ಕುಳಿತಿರುವ ದೃಶ್ಯವೊಂದು ಸೆರೆಯಾಗಿ ಅದು ಎಲ್ಲರಿಂದ ಟೀಕೆಗೆ ಗುರಿಯಾಗಿತ್ತು. ಇದರ ಕುರಿತು ಮೊಯರ್ ವಿಚಿತ್ರ ನಿಲುವನ್ನು ಹೊಂದಿದ್ದರು. ನಾನು ಮಾಡಿದ್ದು ಮೂರ್ಖತನ; ಆದರೂ ನಾನು ಪುನಃ ಹಾಗೆ ಮಾಡಲು ಸಿದ್ಧ ಎಂದಿದ್ದರು. ತಾನು ಹಲವು ಸಮಯಗಳಿಂದ ಶಾರ್ಕ್ ಜೊತೆ ಒಡನಾಡುತ್ತಿದ್ದು, ಅವುಗಳ ವರ್ತನೆ ತನಗೆ ತಿಳಿದಿದೆ. ತಾನು ಇನ್ನೊಮ್ಮೆ ಶಾರ್ಕ್ ಮೇಲೆ ನೆಗೆಯಲು ಸಿದ್ಧ. ಆದರೆ ಸ್ವಲ್ಪ ಸಮಯ ಕಾಯುತ್ತೇನೆ ಎಂದಿದ್ದರು. ಈಗ ಅವರ ಮೇಲೆ ಶಾರ್ಕ್ ದಾಳಿ ಮಾಡಿದೆ.
ಇದನ್ನೂ ನೋಡಿ: Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ತುರ್ತು ಭೂಸ್ಪರ್ಶ
ಇದನ್ನೂ ನೋಡಿ: Amazon Prime: ಜಿಯೋದ ಈ ಕಡಿಮೆ ಬೆಲೆಯ ಪ್ಲಾನ್ನಲ್ಲಿ ಅಮೆಜಾನ್ ಪ್ರೈಮ್ ಉಚಿತವಾಗಿ ಪಡೆಯಿರಿ
(Shark attacks a man called Shark Rider in western Australia)
Published On - 4:37 pm, Sat, 31 July 21