Viral : ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ಅಪರೂಪದ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮಹಾವೀರ್ ಸಿಂಘ್ ಮತ್ತು ಪಟಾನ್ನ ರೀನ್ಲಾಬಾ ಅವರ ನಿಶ್ಚಿತಾರ್ಥ ನಡೆದಿತ್ತು. ಆದರೆ ರೀನ್ಲಾಬಾ ಅಪಘಾತಕ್ಕೆ ಒಳಗಾದರು. ಇದರಿಂದ ಅವರ ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಿ ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಆಗ ತನ್ನ ಕುಟುಂಬ ಈ ಮದುವೆಯನ್ನು ನಿರಾಕರಿಸಿದರೂ ಮಹಾವೀರ್ ಮಾತ್ರ ರೀನ್ಲಾಬಾ ಅವರೊಂದಿಗೇ ಮದುವೆಯಾಗಬೇಕೆಂದು ಹಠ ಹಿಡಿದರು. ಇದೀಗ ಅವರ ಮದುವೆ ಯಶಸ್ವಿಯಾಗಿ ನೆರವೇರಿದೆ.
ಇದನ್ನೂ ಓದಿ : ಅವಳಿ ಸಹೋದರಿಯರನ್ನು ಮದುವೆಯಾದ ವರ; ವಿಡಿಯೋ ವೈರಲ್
ಇವರಿಬ್ಬರ ನಿಶ್ಚಿತಾರ್ಥ ಪರಸ್ಪರ ಕುಟುಂಬದ ಒಪ್ಪಿಗೆಯ ಮೇರೆಗೆ ಗುಜರಾತ್ನ ಪಟಾನ್ನಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು. ನಂತರ ಎರಡೂ ಕುಟುಂಬದವರ ಬಾಂಧವ್ಯವೂ ವೃದ್ಧಿಸಿತು. ಆರು ತಿಂಗಳ ಹಿಂದೆ ಮದುವೆಯ ದಿನಾಂಕವನ್ನು ಗೊತ್ತುಪಡಿಸಲಾಯಿತು. ಆದರೆ, ರೀನ್ಲಾಬಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ಧಾಗ ಅಕಸ್ಮಾತ್ ಆಗಿ ಬಿದ್ದರು. ಆಗ ಬೆನ್ನುಹುರಿಗೆ ತೀವ್ರ ಗಾಯವಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ದೇಹದ ಕೆಳಭಾಗಕ್ಕೆ ಚಿಕಿತ್ಸೆ ಫಲಿಸಲಿಲ್ಲ.
ಇದನ್ನೂ ಓದಿ : ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ
ಮಹಾವೀರ್ನ ಕುಟುಂಬದವರು ಮದುವೆ ನಿಲ್ಲಿಸುವುದಾಗಿ ಹೇಳಿದಾಗ ರೀನ್ಲಾಬಾನ ಪೋಷಕರು ಚಿಂತೆಗೀಡಾದರು. ಆದರೆ ಮಹಾವೀರ್ ತನ್ನ ಹುಟ್ಟುಹಬ್ಬದ ದಿನ ಅಂದರೆ ಅಕ್ಟೋಬರ್ 31ರಂದು, ತಾನು ಮದುವೆಯಾಗುವುದಾದರೆ ರೀನ್ಲಾಬಾರನ್ನೇ ಎಂದರು. ನಂತರ ಡಿಸೆಂಬರ್ 1ರಂದು ತನ್ನ ಕುಟುಂಬದವರ ವಿರೋಧದ ಮಧ್ಯೆಯೇ ಅಹಮದಾಬಾದ್ನಲ್ಲಿ ಮದುವೆಯಾದರು. ಅಂತೂ ರೀನ್ಲಾಬಾರನ್ನು ಎತ್ತಿಕೊಂಡೇ ಸಪ್ತಪದಿ ತುಳಿದರು ಮಹಾವೀರ್.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 9:38 am, Wed, 7 December 22