Viral Video : ನಾಯಿಬೆಕ್ಕುಗಳ ಸಾಂಗತ್ಯ ಮನುಷ್ಯನಿಗೆ ಬೇಕೇಬೇಕು. ಹಾಗೆಯೇ ಅವುಗಳಿಗೂ ಮನುಷ್ಯ ಬೇಕು. ಹಾಗಂತ ಸದಾ ಅವುಗಳೊಂದಿಗೆ ಇರಲಾಗುವುದಾ? ದುಡಿಯಬೇಕೆಂದರೆ ಅವುಗಳನ್ನು ಬಿಟ್ಟು ಹೊರಡಲೇಬೇಕು. ಹೊರಡುವಾಗ ಅವುಗಳು ಚಿಕ್ಕಮಕ್ಕಳಂತೆ ಹಠ ಮಾಡುವುದನ್ನು ನೋಡಿದರೆ ಒಂದು ಹೆಜ್ಜೆಯನ್ನೂ ಮುಂದೆ ಇಡಲಾಗದು. ಹಾಗೆ ಮುದ್ದಿನಿಂದ ಜೋತುಬೀಳುತ್ತವೆ. ಮನೆಗಳಲ್ಲಿ ಸಾಕಿದ ನಾಯಿಬೆಕ್ಕುಗಳ ಕಥೆ ಇದಾದರೆ, ಬೀದಿಯಲ್ಲಿರುವ ನಾಯಿಗಳು ಮತ್ತೊಂದು ಥರ. ಅಲ್ಲಿರುವ ಮನೆಗಳೆಲ್ಲವೂ ಅದಕ್ಕೆ ಪ್ರಿಯವೇ. ಏಕೆಂದರೆ ಒಬ್ಬರಿಲ್ಲಾ ಒಬ್ಬರು ನಿತ್ಯವೂ ಆಹಾರ ನೀಡುತ್ತಲೇ ಇರುತ್ತಾರೆ. ಆದರೂ ಬೀದಿನಾಯಿಗಳಿಗೂ ತನ್ನದೇ ಆಯ್ಕೆ ಎನ್ನುವುದಿರುತ್ತದೆ; ಫೇವರಿಟ್ ಪರ್ಸನ್. ಈ ವಿಡಿಯೋ ಗಮನಿಸಿ.
ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಆಟೋ ರಿಕ್ಷಾ ಡ್ರೈವರ್ನೊಂದಿಗೆ ನಿತ್ಯವೂ ಈ ಬೀದಿನಾಯಿ ಹೀಗೆಯೇ ಪ್ರಯಾಣಿಸುತ್ತದೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ಪುಟಕ್ಕೆ 8,000ಕ್ಕಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ರಕ್ಷಿಸಿದ ಪ್ರಾಣಿಗಳ ವಿಡಿಯೋ, ಫೋಟೋಗೆಂದೇ ಇದು ಮೀಸಲಾಗಿದೆ. ಈ ಪುಟವನ್ನು ನಿರ್ವಹಿಸುವವರು, ಯಾವುದೋ ಒಂದು ಪ್ರಾಣಿಯನ್ನು ರಕ್ಷಿಸಿ ಮನೆಗೆ ಹಿಂದಿರುಗುವಾಗ ಈ ದೃಶ್ಯವನ್ನು ಕಂಡು ಚಿತ್ರೀಕರಿಸಿದ್ದಾರೆ. ಏನಿದರ ಹೆಸರು ಎಂದು ಕೇಳಿದಾಗ, ‘ಇದರ ಹೆಸರು ಮೋತಿ, ನನ್ನೊಂದಿಗೆ ನಿತ್ಯವೂ ಪ್ರಯಾಣಿಸುವುದೆಂದರೆ ಇದಕ್ಕೆ ಬಹಳ ಪ್ರೀತಿ’ ಎಂದಿದ್ದಾರೆ ಡ್ರೈವರ್.
ಆಗಸ್ಟ್ 13ರಂದು ಈ ಪೋಸ್ಟ್ ಮಾಡಲಾಗಿದೆ. 1.9 ಮಿಲಿಯನ್ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
ನೀವು ಹೃದಯಶ್ರೀಮಂತಿಕೆಯುಳ್ಳವರು ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ನೆಟ್ಟಿಗರೊಬ್ಬರು ಹಾರೈಸಿದ್ದಾರೆ. ಅನ್ಕಂಡೀಷನಲ್ ಲವ್ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ದೇವರು ನಿಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಬಹುಕಾಲ ಬಾಳು ಮೋತಿ ಎಂದು ಮಗದೊಬ್ಬರು ಆಶಿಸಿದ್ದಾರೆ.
ಬದುಕಿನಲ್ಲಿ ಹಣವನ್ನು ಹೇಗೂ ಪಡೆಯಬಹುದು ಗಳಿಸಬಹುದು. ಆದರೆ ಸಹಾನುಭೂತಿ ಅನುಕಂಪವನ್ನು? ಯೋಚಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:41 am, Mon, 12 September 22