
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಹಳ ಅದ್ಧೂರಿಯಾಗಿ ಮಹಾ ಕುಂಭಮೇಳ ನಡೆಯುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲೆಂದು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ ದಾಖಲೆಯ 10 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ. ಇನ್ನೂ ಹೆಚ್ಚಿನವರು ಛೇ ಈ ಬಾರಿ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದುಂಟು. ಈ ನಡುವೆ ಇಲ್ಲೊಂದು ಜಾಹಿರಾತು ಫೋಟೋ ವೈರಲ್ ಆಗಿದ್ದು, ಪ್ರಯಾಗ್‌ರಾಜ್‌ಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ಕೇವಲ 500 ರೂ. ಗೆ ಪವಿತ್ರ ಸ್ನಾನ ಮಾಡಬಹುದು ಎಂಬ ಡಿಜಿಟಲ್ ಸಂಗಮ ಸ್ನಾನದ ಜಾಹೀರಾತನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಈ ವೈರಲ್ ಪೋಸ್ಟರ್‌ನಲ್ಲಿ, ಭಕ್ತರು ತಮ್ಮ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುವ ಮೂಲಕ ಗಂಗಾ ಸ್ನಾನದ ಪುಣ್ಯವನ್ನು ಪಡೆಯಬಹುದು ಎಂಬ ಜಾಹೀರಾತನ್ನು ನೀಡಲಾಗಿದೆ. ಇದಕ್ಕಾಗಿ ಕೇವಲ 500 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಭಕ್ತರು ಕಳುಹಿಸಿದ ಫೋಟೋಗಳನ್ನು ಪ್ರಿಂಟ್ ಮಾಡಿ ತ್ರಿವೇಣಿ ಸಂಗಮದಲ್ಲಿ ಮುಳುಗಿಸಲಾಗುವುದು ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಡಾ. ಪ್ರಶಾಂತ್ ಮಿಶ್ರಾ (@drprashantmish6) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೈರಲ್ ಪೋಸ್ಟ್‌ನಲ್ಲಿ “144 ವರ್ಷಗಳಿಗೊಮ್ಮೆ ಸಿಗುವ ಅವಕಾಶ; ದೈವಿಕ ಮಹಾ ಕುಂಭದಲ್ಲಿ ಪುಣ್ಯ ಸ್ನಾನ ಮಾಡಲು ಇದು ಕೊನೆಯ ಅವಕಾಶ. ಅದನ್ನು ಕಳೆದುಕೊಳ್ಳಬೇಡಿ. ನಿಮ್ಮ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ, ಆ ಫೋಟೋವನ್ನು ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸುತ್ತೇವೆ.
ಪ್ರಯೋಜನಗಳು:
ನಿಮ್ಮ ಆತ್ಮವನ್ನು ಶುದ್ಧೀಕರಿಸಬಹುದು, ನೀವು ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ, ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು. ಈ ಕ್ಷಣ ನಿಮ್ಮ ಜೀವನದಲ್ಲಿ ಮತ್ತೆ ಬರಲು ಸಾಧ್ಯವಿಲ್ಲ. ಇದೆಲ್ಲವೂ ಕೇವಲ 500 ರೂ.ಗಳಿಗೆ” ಎಂದು ಜಾಹೀರಾತಿನಲ್ಲಿ ಬರೆದಿರುವ ದೃಶ್ಯವನ್ನು ಕಾಣಬಹುದು.
ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಇದು ಬ್ಯುಸಿನೆಸ್ ಅಂದ್ರೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ, ಮತ್ತೊಬ್ಬ ಬಳಕೆದಾರರು ʼಜನ ಅವಕಾಶವನ್ನು ಹೇಗೆಲ್ಲಾ ಉಪಯೋಗಿಸ್ತಾರೆ ನೋಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಲ್ಲಾ ನಮ್ಮ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯʼ ಎಂದು ತಮಾಷೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ