ಸಾಮಾನ್ಯವಾಗಿ ಸರ್ಕಾರಿ ಅಥವಾ ಖಾಸಗಿ ಯಾವುದೇ ಬಸ್ಸಿನಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಿರುತ್ತಾರೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಸ್ಸಿನಲ್ಲಿ ಎಷ್ಟೇ ಪ್ರಯಾಣಿಕರಿದ್ದರೂ, ತಮ್ಮ ಪ್ರಾಣವನ್ನು ಲೆಕ್ಕಿಸದೆ, ಶಾಲೆಗೆ ಬೇಗ ತಲುಪಬೇಕೆಂದು ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಾರೆ. ಈ ರೀತಿಯ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದರಿಂದ ಅನೇಕರು ಪ್ರಾಣ ಕಳೆದುಕೊಂಡದ್ದು ಇದೆ. ಇದರ ಬಗ್ಗೆ ಸರ್ಕಾರಗಳು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಈ ರೀತಿ ಅಪಾಯಕಾರಿಯಾಗಿ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಹಕ್ಕು ನಮಗಿದೆಯೇ ಹೊರತು, ಅವರ ಮೇಲೆ ಕೈ ಮಿಲಾಯಿಸುವ ಅಥವಾ ದರ್ಪ ತೋರುವ ಹಕ್ಕು ನಮಗಿಲ್ಲ. ಆದರೆ ತಮಿಳುನಾಡಿನ ಬಿಜೆಪಿ ನಾಯಕಿ ಹಾಗೂ ನಟಿ ರಂಜನಾ ನಾಚಿಯರ್ ಬಸ್ಸಿನ ಫುಟ್ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ, ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಭರದಲ್ಲಿ ಕಪಾಳಮೋಕ್ಷ ಮಾಡಿದ್ದಲ್ಲದೆ, ವಿದ್ಯಾರ್ಥಿಗಳನ್ನು ನಿಂದಿಸಿದ್ದು ಇದೀಗ ಪೋಲಿಸರ ಅಥಿತಿಯಾಗಿದ್ದಾರೆ. ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುವುದು ಅಪಾಯಕಾರಿ ನಿಜ. ಆದರೆ ಆ ಶಾಲಾ ಮಕ್ಕಳ ಮೇಲೆ ಕೈ ಮಾಡಿದ್ದು ಎಷ್ಟು ಸರಿ ಎಂದು ಆಕೆಯ ನಡೆಯನ್ನು ಅನೇಕರು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಈ ಘಟನೆ ಏನು ಎಂಬುದನ್ನು ನೋಡುವುದಾದರೆ, ಚೆನ್ನೈನ ಕುಂಟ್ರತ್ತೂರಿನಿಂದ ಪೋರೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದರು. ಈ ಬಸ್ ಹಿಂದೆಯೇ ಬಿಜೆಪಿ ನಾಯಕಿ ರಂಜನಾ ನಾಚಿಯಾರ್ ಕೂಡಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಿದ್ಯಾರ್ಥಿಗಳು ಫುಟ್ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ ದೃಶ್ಯವನ್ನು ಕಂಡ ರಂಜನಾ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಬಸ್ ನಿಲ್ಲಿಸಿ, ಆ ಬಸ್ಸಿನ ಚಾಲಕನಿಗೆ ಬೈದು ಬುದ್ಧಿ ಹೇಳುತ್ತಾರೆ. ಅಷ್ಟೇ ಅಲ್ಲದೆ ಬಸ್ಸಿನಿಂದ ವಿದ್ಯಾರ್ಥಿಗಳನ್ನು ಕೆಳಗಿಳಿಸಲು ಪ್ರಯತ್ನಿಸುತ್ತಾರೆ. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಿ, ಬೈದು ಬಸ್ಸಿನಿಂದ ಇಳಿಯುವಂತೆ ಮಾಡುತ್ತಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನೂನನ್ನು ಕೈಗೆತ್ತಿಕೊಂಡು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುವ ಅಧಿಕಾರ ಆಕೆಗೆ ಕೊಟ್ಟವರು ಯಾರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾದರು ರಂಜನಾ ವಿರುದ್ಧ ಕಿಡಿಕಾರಿದ್ದಾರೆ.
Laws exist because we can’t trust the moral intuition of a mob or a vigilante. This civilian woman abuses conductor, beats up kids and is shockingly hailed as ” சிங்கப்பெண்ணே 🔥” by Twitterati.
Easy way to test your moral intuition is to stretch it to its limits or change the… pic.twitter.com/vgAS07Kujk
— Karthik Balachandran (@karthik2k2) November 4, 2023
ಇಷ್ಟೆಲ್ಲಾ ಘಟನೆಗಳು ನಡೆದ ಬಳಿಕ ಆ ಸರ್ಕಾರಿ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ ಐದರ ಅಡಿಯಲ್ಲಿ ಅಪ್ರಾಪ್ತರ ಮೇಲೆ ದರ್ಪ ತೋರಿದ್ದಕ್ಕಾಗಿ ಹಾಗೂ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿ ಅವರನ್ನು ನಿಂದಿಸಿದ ಆರೋಪದ ಅಡಿಯಲ್ಲಿ ರಂಜನಾ ನಾಚಿಯಾರ್ ಅವರನ್ನು ನಗರದ ಗೇರುಗಂಬಾಕ್ಕಂ ಪೋಲಿಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಇದನ್ನೂ ಓದಿ: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?
ರಂಜನಾ ವಿದ್ಯಾರ್ಥಿಗಳ ಮೇಲೆ ಹಾಗೂ ಬಸ್ಸಿನ ಚಾಲಕನ ಮೇಲೆ ದರ್ಪ ತೋರಿದ ವಿಡಿಯೋ ತುಣುಕನ್ನು ಕಾರ್ತಿಕ್ ಬಾಲಚಂದ್ರನ್ ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಿಳೆ ಕಾನೂನನ್ನು ಕೈಗೆತ್ತಿಕೊಂಡು ವಿದ್ಯಾರ್ಥಿಗಳ ಮೇಲೆ ಕೈ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ಉದ್ದೇಶ ಸರಿಯಾಗಿದ್ದರೂ, ಕಾನೂನು ಕೈಗೆತ್ತಿಕೊಳ್ಳಲು ಆಕೆ ಯಾರು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದ ಶಾಲಾ ಮಕ್ಕಳ ಪ್ರಾಣವನ್ನು ಆಕೆ ಕಾಪಾಡಿದ್ದಾಳೆ ಎಂದು ಹೇಳಿದ್ದಾರೆ. ಇನ್ನೂ ಅನೇಕರು ವಿದ್ಯಾರ್ಥಿಗಳ ಮೇಲಿನ ಆಕೆಯ ದರ್ಪದ ವರ್ತನೆ ಸರಿಯಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:44 pm, Sat, 4 November 23