Viral: ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳಮುಖಿಯನ್ನು ಅದ್ದೂರಿಯಾಗಿ ಮದುವೆಯಾದ ಯುವಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2024 | 5:55 PM

ಅಂತರ್ಜಾತಿಯ ಯುವತಿಯನ್ನು ಪ್ರೀತಿಸಿದರೆ ಅಥವಾ ಮದುವೆಯಾದರೆ ಈ ಸಮಾಜ ನೂರೆಂಟು ಕೊಂಕು ಮಾತುಗಳನ್ನಾಡುತ್ತದೆ. ಅಂತದ್ರಲ್ಲಿ ಇಲ್ಲೊಬ್ಬ ಯುವಕ ಸಮಾಜದ ಕಟ್ಟುಪಾಡು, ಕೊಂಕು ಮಾತುಗಳಿಗೆ ತಲೆಕೆಡಿಸಿಕೊಳ್ಳದೆ, ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತೃತೀಯಲಿಂಗಿಯನ್ನು ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಪ್ರೀತಿ ಯಾವಾಗ ಯಾರ ಮೇಲೆ ಹುಟ್ಟುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರೀತಿ ಕುರುಡು ಅಂತ ಹೇಳ್ತಾರೆ. ಪ್ರೀತಿಸುವ ಜೀವಗಳೂ ಅಷ್ಟೇ ಜಾತಿ, ವಯಸ್ಸು, ಅಂತಸ್ತು ಇದ್ಯಾವುದನ್ನೂ ಲೆಕ್ಕಿಸದೆ, ಸಮಾಜದ ಕೊಂಕು ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ತಾವು ಪ್ರೀತಿಸಿದ ಜೀವದ ಜೊತೆ ಜೀವನಪರ್ಯಂತ ಬಾಳಬೇಕು ಎಂದು ಬಯಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಸಮಾಜ ಏನು ಹೇಳುತ್ತೆ ಎಂಬ ಬಗ್ಗೆ ತಲೆಕಡೆಸಿಕೊಳ್ಳದೆ ಕುಟುಂಬಸ್ಥರ ಸಮ್ಮುಖದಲ್ಲಿ ತಾನು ಪ್ರೀತಿಸಿದ ತೃತೀಯಲಿಂಗಿಯೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ನವ ಜೋಡಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.

ಈ ಘಟನೆ ತೆಲಂಗಾಣದ ಕರೀನಗರದಲ್ಲಿ ನಡೆದಿದ್ದು, ಯುವಕನೊಬ್ಬ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳಮುಖಿಯೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾನೆ. ಹೌದು ಜಗಿತ್ಯಾಲ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ಲಕ್ಷೀಪುರ ಗ್ರಾಮದ 24 ವರ್ಷದ ಶ್ರೀನಿವಾಸ ಎಂಬ ಯುವಕ ತನ್ನ ಕುಟುಂಬಸ್ಥರ ಮನವೊಲಿಸಿ 23 ವರ್ಷದ ಕರುಣಾಂಜಲಿಯನ್ನು ಅದ್ದೂರಿಯಾಗಿ ಮದುವೆಯಾಗಿದ್ದಾನೆ. ಈ ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಇವರು ಸಮಾಜದ ಎಲ್ಲಾ ಅಡೆತಡೆಗಳನ್ನು ಮುರಿದು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಮಸೀದಿ ಮೇಲೆ ಗುಮ್ಮಟವನ್ನು ಏಕೆ ನಿರ್ಮಿಸಲಾಗುತ್ತದೆ? ಇದರ ಹಿಂದಿನ ಕಾರಣ ಏನು?

ಈ ಕುರಿತ ವಿಡಿಯೋವೊಂದನ್ನು ChotaNewsTelugu ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಯುವಕನೊಬ್ಬ ತೃತೀಯಲಿಂಗಿಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮತ್ತು ಅದ್ದೂರಿಯಾಗಿ ಮದುವೆಯಾದ ಸುಂದರ ದೃಶ್ಯವನ್ನು ಕಾಣಬಹುದು. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಸುಂದರ ದಾಂಪತ್ಯ ಜೀವನಕ್ಕೆ ಶುಭ ಕೋರಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ