ಪುಟ್ಟ ಮಕ್ಕಳು ಮನೆಯ ಸಾಕು ಪ್ರಾಣಿಗಳೊಂದಿಗೆ ಬಹು ಬೇಗನೇ ಹೊಂದಿಕೊಳ್ಳುತ್ತಾರೆ. ಮುದ್ದಿನ ಬೆಕ್ಕು ಶ್ವಾನಗಳೆಂದರೆ ಪುಟಾಣಿಗಳಿಗೆ ಬಲು ಇಷ್ಟ. ಸಾಕು ಪ್ರಾಣಿಗಳೂ ಅಷ್ಟೆ ಮನೆ ಮಕ್ಕಳ ಜೊತೆ ಆಟವಾಡಲು ಅವರೊಂದಿಗೆ ಸಮಯ ಕಳೆಯಲು ತುಂಬಾನೇ ಇಷ್ಟಪಡುತ್ತವೆ. ಅದರಲ್ಲೂ ಈ ಮಕ್ಕಳು ತಮ್ಮ ಬಳಿ ಎಷ್ಟೇ ಆಟಿಕೆಗಳಿದ್ದರೂ ಮನೆಯಲ್ಲಿರುವ ನಾಯಿ ಬೆಕ್ಕುಗಳ ಜೊತೆಗೆ ಹೆಚ್ಚಾಗಿ ಆಟವಾಡಲು ಇಷ್ಟಪಡುತ್ತಾರೆ. ಹೀಗೆ ಮನೆಯ ಸಾಕು ಪ್ರಾಣಿಗಳು ಮತ್ತು ಮಕ್ಕಳು ಜೊತೆಯಾಗಿ ಆಟವಾಡುತ್ತಾ ಸಮಯ ಕಳೆಯುವಂತಹ ಹೃದಯಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅಂತಹದ್ದೇ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಲಕಿಯೊಬ್ಬಳು ಮನೆಯಲ್ಲಿ ಡಾಕ್ಟರ್ ಆಟವಾಡುತ್ತಾ, ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಿಸುವಂತೆ ಈಕೆ ಮನೆಯ ನಾಯಿಗೆ ಆಪರೇಷನ್ ಮಾಡಿ, ಅದರ ಹೊಟ್ಟೆಯಿಂದ ಬೆಕ್ಕನ್ನು ಹೊರ ತೆಗೆದಿದ್ದಾಳೆ. ಈ ಹಾಸ್ಯಮಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪುಟ್ಟ ಮಕ್ಕಳು ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಸೇರಿ ಅಡುಗೆಯಾಟ, ಮನೆ ಆಟ ಇತ್ಯಾದಿ ಆಟಗಳನ್ನು ಆಡುತ್ತಿರುತ್ತಾರೆ. ಅದೇ ರೀತಿ ಈ ಪುಟ್ಟ ಬಾಲಕಿ ಮನೆಯ ಶ್ವಾನ ಮತ್ತು ಬೆಕ್ಕಿನೊಂದಿಗೆ ಡಾಕ್ಟರ್ ಆಟವನ್ನು ಆಡಿದ್ದಾಳೆ. ಇದ್ರಲ್ಲಿ ತಮಾಷೆಯ ವಿಷಯ ಏನಪ್ಪಾ ಅಂದ್ರೆ ವೃತ್ತಿಪರ ಡಾಕ್ಟರ್ ಗಳಂತೆಯೇ ಈ ಪುಟ್ಟ ಬಾಲಕಿ ನಾಯಿಗೆ ಆಪರೇಷನ್ ಮಾಡಿದ್ದಾಳೆ. ಈ ಫನ್ನಿ ವಿಡಿಯೋವನ್ನು @Cute_kidshd ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿ ಮನೆಯಲ್ಲಿ ಡಾಕ್ಟರ್ ಆಟ ಆಡುತ್ತಿರುವುದನ್ನು ಕಾಣಬಹುದು.ಆಕೆ ತನ್ನ ಎರಡೂ ಕೈಗಳಿಗೂ ಗ್ಲೋವ್ಸ್, ವೈದ್ಯರು ಅಪರೇಷನ್ ಮಾಡುವಾಗ ತೊಡುವಂತಹ ಹಸಿರು ಬಟ್ಟೆಯನ್ನು ತೊಟ್ಟು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ, ಮನೆಯ ಮುದ್ದಿನ ಶ್ವಾನಕ್ಕೆ ಆಪರೇಷನ್ ಮಾಡುತ್ತಾಳೆ. ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಶ್ವಾನದ ಹೊಟ್ಟೆಯಿಂದ ಬೆಕ್ಕನ್ನು ಹೊರತೆಗೆದು, ಬೆಕ್ಕಿನ ತೂಕವನ್ನು ನೋಡಿ, ನಂತರ ಬೆಕ್ಕನ್ನು ಆಕೆಯ ತಂದೆಯ ಕೈಗೆ ಹಸ್ತಾಂತರಿಸುತ್ತಾಳೆ. ಅಬ್ಬಬ್ಬಾ ಈ ಪುಟ್ಟ ಬಾಲಕಿಯ ಆಪರೇಷನ್ ಶೈಲಿಯನ್ನು ಕಂಡು ಖಂಡಿತವಾಗಿ ಈಕೆ ಮುಂದೊಂದು ದಿನ ಸರ್ಜನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: ದೈತ್ಯ ಹೆಬ್ಬಾವಿನ ಮೇಲೆ ಸಮರ ಸಾರಿದ ಮುಂಗುಸಿ ಸೈನ್ಯ, ಇಲ್ಲಿದೆ ಭೀಕರ ಕಾಳಗದ ದೃಶ್ಯ
ಜನವರಿ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 42 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಆ ಶ್ವಾನದ ತಾಳ್ಮೆಗೆ ಪ್ರಶಸ್ತಿ ಕೊಡಬೇಕುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾಯಿ ಬೆಕ್ಕಿಗೆ ಜನ್ಮ ನೀಡುವ ಫನ್ನಿ ದೃಶ್ಯ ನೋಡಲು ತುಂಬಾ ಆಸಕ್ತಿದಾಯಕವಾಗಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಖಂಡಿತ ಆಕೆ ಡಾಕ್ಟರ್ ಆಗುತ್ತಾಳೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಈ ದೃಶ್ಯವನ್ನು ಕಂಡು ನಕ್ಕು ನಕ್ಕು ಸುಸ್ತಾಯ್ತು ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Thu, 1 February 24