ಮದುವೆ, ಗೃಹ ಪ್ರವೇಶ ಹೀಗೆ ಯಾವುದೇ ಸಮಾರಂಭವಿರಲಿ, ಮನೆಯ ಮುಂದೆ ಹಸಿರು ತೆಂಗಿನ ಗರಿಯ ಚಪ್ಪರ ಹಾಕಿದ್ರೆ ಸಾಕು ಆ ಸಮಾರಂಭಕ್ಕೊಂದು ಕಳೆ ಬರುತ್ತದೆ. ಅದರಲ್ಲೂ ಮದುವೆ ಮನೆಗಳಲ್ಲಿ ಚಪ್ಪರವು ಪ್ರಮುಖ ಪಾತ್ರ ವಹಿಸುತ್ತದೆ. ಸಂಪ್ರದಾಯದ ಭಾಗವಾಗಿ ಮನೆಯ ಮುಂಭಾಗದಲ್ಲಿ ಚಪ್ಪರವನ್ನು ಹಾಕಲಾಗುತ್ತದೆ. ಈ ಚಪ್ಪರವನ್ನು ಹಸಿರು ತೆಂಗಿನ ಗರಿಗಳಿಂದ ನಿರ್ಮಿಸಲಾಗುತ್ತದೆ. ಮತ್ತು ಈ ಚಪ್ಪರವನ್ನು ಕೂಡಾ ಮದುವೆ ಭಾಗವಾಗಿ ಪೂಜಿಸಲಾಗುತ್ತದೆ. ಚಪ್ಪರಕ್ಕೆ ಅರಶಿನ, ಕುಂಕುಮವನ್ನು ಹಚ್ಚಿ ಹೂವನ್ನು ಹಾಕಿ ಧೂಪ, ದೀಪವನ್ನು ಬೆಳಗುವ ಮೂಲಕ ಚಪ್ಪರ ಪೂಜೆಯನ್ನು ಸಹ ಮಾಡಲಾಗುತ್ತದೆ. ಹೀಗೆ ಮದುವೆ ಮನೆಯಲ್ಲಿ ಮಾಡುವ ಚಪ್ಪರ ಪೂಜೆಯು ಶುಭ ಸಮಾರಂಭದ ಆರಂಭವನ್ನು ಸೂಚಿಸುತ್ತದೆ. ಕೆಲವರು ಸರಳವಾಗಿ ಚಪ್ಪರ ಹಾಕಿದರೆ, ಇನ್ನೂ ಕೆಲವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಅದ್ಧೂರಿ ಚಪ್ಪರ ಹಾಕಿಸ್ತಾರೆ. ಅದೇ ರೀತಿ ಇಲ್ಲೊಂದು ಮನೆಯಲ್ಲಿ ಬರೋಬ್ಬರಿ ನೂರು ಅಡಿ ಉದ್ದದ ಮದುವೆ ಚಪ್ಪರವನ್ನು ಹಾಕಲಾಗಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಮ್ಮ ಬೆಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಮದುವೆ ಮನೆಯ ಮುಂದೆ ಈ ನೂರು ಅಡಿ ಉದ್ದದ ಚಪ್ಪರವನ್ನು ಹಾಕಲಾಗಿದೆ. ಈ ವಿಡಿಯೋವನ್ನು ಕಲಾತ್ಮಕವಾಗಿರುವಂತಹ ಚಪ್ಪರ ಹಾಕುವುದರಲ್ಲಿ ನೈಪುಣ್ಯತೆಯನ್ನು ಹೊಂದಿರುವಂತಹ SLV ಈವೆಂಟ್ (@slv_events_plnners) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 100 ಅಡಿ ಉದ್ದವಿರುವ ಮದುವೆ ಚಪ್ಪರ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಎಸ್.ಎಲ್.ವಿ ಈವೆಂಟ್ ಅವರು ಬೆಂಗಳೂರಿನ ಮದುವೆ ಮನೆಯೊಂದರಲ್ಲಿ ಬಹಳ ಸೃಜನಾತ್ಮಕವಾಗಿ ಹಸಿರು ತೆಂಗಿನ ಗರಿಗಳಿಂದ 100 ಅಡಿ ಉದ್ದದ ಮದುವೆ ಚಪ್ಪರವನ್ನು ನಿರ್ಮಿಸಿರುವಂತಹ ಅದ್ಭುತ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಿಂದಿನ ಕಾಲದಲ್ಲಿ ಹಳ್ಳಿ ಕಡೆಗಳಲ್ಲಿ 300 ಅಡಿ, 500 ಅಡಿ ಉದ್ದದ ಚಪ್ಪರವನ್ನು ಹಾಕಿದ್ದೂ ಇದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಈ ವರ್ಕ್ ನಿಜವಾಗಿಯೂ ಅದ್ಭುತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಬಹಳ ಸುಂದರವಾಗಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ