AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಪ್ರವೇಶ ಸಂಭ್ರಮ ಮನೆಮಾಡಬೇಕಿದ್ದ ಮನೆಯಲ್ಲಿ ಅಪ್ಪನನ್ನು ಮಗ ಸಾಯಿಸಿಬಿಟ್ಟ, ಕಾರಣ ಏನು?

ಮಗನಿಂದಲೇ ತಂದೆ ಹತ್ಯೆ.. ಕುಡಿತದ ಚಟಕ್ಕೆ ದಾಸನಾಗಿ ಮನೆ ಮಂದಿಯ ನೆಮ್ಮದಿ ಕೆಡಿಸಿದ್ದ ತಂದೆ ಮೇಲೆ ಪುತ್ರನ ರೋಷಾವೇಶ. ಹೊಸ ಮನೆ ಗೃಹ ಪ್ರವೇಶದ ಖುಷಿಯಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ.. ಕುಡಿತದ ಅಮಲಿನಲ್ಲಿ ತಂದೆಮೇಲೆ ತಿರಗಿಬಿದ್ದ ಮಗನಿಂದ ನಡೆದು ಹೋಯ್ತು ಹತ್ಯೆ..

ಗೃಹ ಪ್ರವೇಶ ಸಂಭ್ರಮ ಮನೆಮಾಡಬೇಕಿದ್ದ ಮನೆಯಲ್ಲಿ  ಅಪ್ಪನನ್ನು ಮಗ ಸಾಯಿಸಿಬಿಟ್ಟ, ಕಾರಣ ಏನು?
ಗೃಹಪ್ರವೇಶ ಸಂಭ್ರಮ ಮನೆಮಾಡಬೇಕಿದ್ದ ಮನೆಯಲ್ಲಿ ಅಪ್ಪನನ್ನು ಮಗ ಸಾಯಿಸಿಬಿಟ್ಟ
ಮಂಜುನಾಥ ಕೆಬಿ
| Edited By: |

Updated on: Feb 01, 2024 | 4:46 PM

Share

ಇಡೀ ಕುಟುಂಬಸ್ಥರು ಕಷ್ಟಪಟ್ಟು ಸುಂದರ ಮನೆಯನ್ನು ಕಟ್ಟಿಕೊಂಡಿದ್ದರು. ಗೃಹ ಪ್ರವೇಶಕ್ಕಾಗಿ ನೆಂಟರಿಷ್ಟರಿಗೆ ಅಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು. ಇನ್ನು ಹದಿನೈದು ದಿನ ಕಳೆದ್ರೆ ಹೊಸ ಮನೆ ಗೃಹಪ್ರವೇಶವಾಗಬೇಕಿತ್ತು. ಸಂಭ್ರಮ ಮನೆಮಾಡಬೇಕಿದ್ದ ಮನೆಯಲ್ಲಿ ಘೋರ ದುರಂತವೇ ನಡೆದು ಹೋಗಿದೆ. ಮನೆಯ ಅಂತಿಮ ಹಂತದ ಕೆಲಸದಲ್ಲಿ ತೊಡಗಿದ್ದ ತಂದೆ ಮಕ್ಕಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಅಮಲಿನಲ್ಲಿ ಹಳೆಚಾಳಿಯಂತೆ ಜಗಳ ತೆಗೆದ ತಂದೆ ನಡುರಾತ್ರಿಯಲ್ಲಿ ಕಿರಿಕ್ ಶುರು ಮಾಡಿದ್ದ. ತಾನೂ ಎಣ್ಣೆ ಏರಿಸಿಕೊಂಡಿದ್ದ ಕೋಪಿಷ್ಟ ಪುತ್ರ ಗಲಾಟೆ ಮಾಡಿದ ತಂದೆಯ ಪ್ರಾಣವನ್ನೇ ತೆಗೆದು ಎಸ್ಕೇಪ್ ಆಗಿದ್ದಾನೆ. ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಕಣ್ಣೀರು ಹರಿದಿದೆ.

ಹೌದು ಇನ್ನು ಹದಿನೈದು ದಿನ ಕಳೆದಿದ್ದರೆ ಆ ಮನೆಯ ಜನರ ದಶಕಗಳ ಕನಸು ನನಸಾಗೋದ್ರಲ್ಲಿತ್ತು, ಫೆಬ್ರವರಿ 18ಕ್ಕೆ ಗೃಹ ಪ್ರವೇಶದ ದಿನಾಂಕ ನಿಗದಿಮಾಡಿದ್ದ ಮನೆ ಮಂದಿ ಅದಕ್ಕಾಗಿ ಭರ್ಜರಿ ತಯಾರಿ ನಡೆದಿರುವಾಗಲೇ ತಂದೆ ರವಿ (45) ಮೇಲೆ ಪುತ್ರ ಸುದೀಪ ಹಲ್ಲೆ ಮಾಡಿ ಹತ್ಯೆ ಮಾಡಿರೊ ಆರೋಪ ಕೇಳಿ ಬಂದಿದೆ. ಮನೆ ಕೆಲಸ ಮಾಡುತ್ತಲೆ ನೆಂಟರಿಸ್ಟರಿಗೆಲ್ಲಾ ಆಹ್ವಾನ ಪತ್ರಿಕೆಯನ್ನು ಕೊಟ್ಟು ಮುಗಿಸಿದ್ದ ಕುಟುಂಬ ಖುಷಿಯಲ್ಲಿತ್ತು.

ನಿನ್ನೆ ಬುಧವಾರ ತಾಯಿ ತಮ್ಮ ಅಣ್ಣನ ಮನೆಗೆ ಹೋಗಿದ್ರೆ ಕಿರಿಯ ಮಗ ದುಡಿಮೆಗೆಂದು ದೂರದ ಹೈದ್ರಾಬಾದ್ ನಲ್ಲಿದ್ದ. ಕುಡಿತದ ಚಟಕ್ಕ ದಾಸನಾಗಿದ್ದ ಮನೆಯ ಯಜಮಾನ ರವಿ ಮಾಮೂಲಿಯಾಗಿ ಕಂಠಪೂರ್ತಿ ಎಣ್ಣೆ ಏರಿಸಿಕೊಂಡು ನಿನ್ನೆ ರಾತ್ರಿ ಮನೆಗೆ ಬಂದವನೇ ಮಗನ ಜೊತೆಗೆ ಕಿರಿಕ್ ಶುರುಮಾಡಿದ್ದಾನೆ. ರಾತ್ರಿ 11 ಗಂಟೆ ವೇಳೆಯಲ್ಲಿ ಮನೆಯೊಳಗೆ ಅಪ್ಪ ಮಕ್ಕಳ ಕದನ ಶುರುವಾಗಿದೆ.

ಆದ್ರೆ ತಂದೆ ಮಕ್ಕಳ ಜಗಳ ಇದೇನು ಹೊಸದಲ್ಲ ಎಂದು ಎಲ್ಲರೂ ಸುಮ್ಮನಾಗಿದ್ದಾರೆ, ಆದರೆ ಬೆಳಕಾಗುವಷ್ಟರಲ್ಲಿ ಮೈ ಕೈ ಮೇಲೆ ತೀವ್ರ ಗಾಯವಾದ ಸ್ಥಿತಿಯಲ್ಲಿ ಮನೆಯೊಳಗೆ ಬಿದ್ದಿದ್ದ ರವಿಯನ್ನ ಕಂಡ ಗ್ರಾಮಸ್ಥರು ಆರೈಕೆ ಮಾಡಿ ನೀರು ಕುಡಿಸುವಷ್ಟರಲ್ಲಿ ಆತ ಪ್ರಾಣ ಬಿಟ್ಟಿದ್ದು ಪುತ್ರ ಎಸ್ಕೇಪ್ ಆಗಿದ್ದಾನೆ. ಪುತ್ರನೇ ರಾತ್ರಿ ಹಲ್ಲೆ ಮಾಡಿ ಮನೆಯಿಂದ ಎಸ್ಕೇಪ್ ಆಗಿದ್ದಾನೆ, ತೀವ್ರವಾಗಿ ಗಾಯಗೊಂಡಿದ್ದ ರವಿ ರಾತ್ರಿಯೆಲ್ಲಾ ನರಳಾಡಿ ಬೆಳಗಾಗುವಷ್ಟರಲ್ಲಿ ಪ್ರಾಣ ಬಿಟ್ಟಿದ್ದು ಕುಡಿತದಿಂದ ತಂದುಕೊಂಡ ಆಪತ್ತು ಅಪ್ಪ ಮಗನ ಮಧ್ಯೆ ಜಗಳವೇರ್ಪಟ್ಟು ಕೊಲೆಯಲ್ಲಿ ಅಂತ್ಯವಾಗಿದೆ

ರವಿಗೆ ಮದುವೆಯಾಗಿ 25 ವರ್ಷವಾಗಿದೆ. ಇದ್ದ ಅಲ್ವಸ್ವಲ್ಪ ಆಸ್ತಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರಂತೆ. ಮೊದಲಿನಿಂದಲೂ ಕುಡಿತದ ಚಟಕ್ಕೆ ದಾಸನಾಗಿದ್ದ ರವಿ ಮನೆಯ ಜವಾಬ್ದಾರಿ ಏನೂ ನೋಡಿಕೊಳ್ತಿರಲಿಲ್ಲ. ತಾಯಿಯೇ ಹೇಗೋ ಎಲ್ಲವನ್ನು ನಿಭಾಯಿಸಿಕೊಂಡು ಮಕ್ಕಳನ್ನ ಓದಿಸಿದ್ದಾರೆ.

ಬೆಳೆದು ದೊಡ್ಡವಾಗಿದ್ದ ಮಕ್ಕಳು ತಾವೇ ದುಡಿಯೋಕೆ ಶುರುಮಾಡಿದ್ರು, ದೂರದ ಹೈದ್ರಾಬಾದ್ ನಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕಿರಿಯ ಪುತ್ರ ಸಂದೀಪ ದುಡಿದ ಹಣವನ್ನು ಒಟ್ಟುಗೂಡಿಸಿಕೊಟ್ಟು ಹೊಸ ಮನೆಕಟ್ಟಿಸಿದ್ದ. ಹಳ್ಳಿಯಲ್ಲಿ ಸುಂದರ ಮನೆ ನಿರ್ಮಿಸಿ ಫೆಬ್ರವರಿ 18ಕ್ಕೆ ಗೃಹ ಪ್ರವೇಶದ ದಿನಾಂಕ ಗೊತ್ತು ಮಾಡಿ ಸಂಬಂಧಿಕರಿಗೆಲ್ಲಾ ಆಹ್ವಾನವನ್ನೂ ನೀಡಿದ್ದರು.

ಆದ್ರೆ ಈ ನಡುವೆ ನಿನ್ನೆ ಮನೆಯೊಡತಿ ತನ್ನ ಅಣ್ಣನ ಮನೆಗೆ ಹೋಗಿದ್ದ ವೇಳೆ ರವಿ ಮಾಮೂಲಿಯಾಗಿ ಕುಡಿದು ಬಂದು ಕ್ಯಾತೆ ಶುರುಮಾಡಿದ್ದಾನೆ. ತಾನೂ ಕುಡಿದು ಬಂದಿದ್ದ ಪುತ್ರ ಸುದೀಪ್ ಕೂಡ ಅಪ್ಪನ ವಿರುದ್ದ ಜಗಳಕ್ಕೆ ಇಳಿದಿದ್ದಾನೆ. ಮನೆಯೊಳಗೆ ತಂದೆಗೆ ಮನಬಂದಂತೆ ಹಲ್ಲೆ ನಡಸಿದ್ದ ಪುತ್ರ ರವಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಾಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

Also Read: ಹೆಂಡತಿಯನ್ನು ಜೊತೆಗೆ ಕಳಿಸ್ತಿಲ್ಲ ಎಂದು ಮಾವನ ಮೇಲೆ ಹಲ್ಲೆ ಮಾಡಿ ಕೊಂದೇಬಿಟ್ಟ ಅಳಿಯ

ಆದ್ರೆ ಬೆಳಿಗ್ಗೆವರೆಗೂ ಏಕಾಂಗಿಯಾಗಿ ಬಿದ್ದು ನರಳಾಡಿದ ರವಿ ಬೆಳಿಗ್ಗೆ ಊರ ಜನರು ಬಂದು ನೋಡಿದಾಗ ಸಂಪೂರ್ಣ ಅಸ್ವಸ್ಥಗೊಂಡಿದ್ದನಂತೆ ಹೇಗೋ ಮಾಡಿ ಒಂದಷ್ಟು ನೀರು ಕುಡಿಸೋ ಯತ್ನ ಮಾಡುವಷ್ಟರಲ್ಲಿ ರವಿ ಪ್ರಾಣಬಿಟ್ಟಿದ್ದಾನೆ. ಊರ ಜನರು ಕೂಡಲೆ ದುದ್ದ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೇಸ್ ದಾಖಲಿಸಿಕೊಂಡು ಶ್ವಾನದಳ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ತಂದೆ ಹಾಗೂ ಮಗನ ನಡುವೆ ನಡೆದ ಜಗಳವನ್ನ ಸ್ಥಳೀಯರು ಗಮನಿಸಿದರೂ ಕೂಡ ಇದು ಮಾಮೂಲಿ ಜಗಳ ಎಂದುಕೊಂಡು ಸುಮ್ಮನಾಗಿದ್ದಾರೆ. ಆದ್ರೆ ಬೆಳಕಾಗುವಷ್ಟರಲ್ಲಿ ಹೊಸ ಮನೆ ತಯಾರಿಯಲ್ಲಿದ್ದ ಮನೆ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಕೊಲೆ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಪುತ್ರನ ಪತ್ತೆಗೆ ಬಲೆ ಬೀಸಿದ್ದರೆ, ಹೊಸ ಮನೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ನಡೆದ ದುರಂತ ಇಡೀ ಕುಟುಂಬವನ್ನೇ ದುಖಃದಲ್ಲಿ ಮುಳುಗಿಸಿದೆ.

ಒಟ್ನಲ್ಲಿ ತಂದೆ ಕುಡಿದು ಬಂದು ಗಲಾಟೆ ಮಾಡ್ತಾನೆ, ಮನೆಯ ಜವಾಬ್ದಾರಿಯನ್ನ ನಾವು ನೋಡಿಕೊಂಡರೂ ನಮಗೆ ನೆಮ್ಮದಿ ಕೊಡ್ತಿಲ್ಲ ಎನ್ನೋ ಸಿಟ್ಟಿನಲ್ಲಿ ತಂದೆಯ ಮೇಲೆ ಪುತ್ರ ಮಾಡಿದ ಹಲ್ಲೆ ತಂದೆಯನ್ನ ಬಲಿ ಪಡೆದಿದೆ. ದಶಕಗಳಿಂದ ಬಾಡಿಗೆ ಮನೆ, ಸಂಬಂಧಿಕರ ಮನೆ ಅಂತಾ ಸಿಕ್ಕ ಸಿಕ್ಕಲ್ಲಿ ಆಶ್ರಯ ಪಡೆದು ಕಡೆಗೊಂದು ಸ್ವಂತ ಸೂರು ಕಟ್ಟಿಕೊಂಡು ಗೂಡು ಸೇರೋ ವೇಳೆಯಲ್ಲಿ ಮನೆಯೊಳಗೆ ರಕ್ತ ಹರಿದಿದ್ದು, ಹಂತಕ ಪುತ್ರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ