Viral Post : ಈ ವ್ಯಕ್ತಿ 48 ಮಕ್ಕಳಿಗೆ ತಂದೆಯಾಗಿದ್ದಾನಾದರೂ ಒಂಟಿಯಾಗಿಯೇ ಇದ್ದಾನೆ ಮತ್ತು ಇನ್ನೂ ಸಾಕಷ್ಟು ಮಕ್ಕಳಿಗೆ ತಂದೆಯಾಗುವ ಸಾಧ್ಯತೆಯನ್ನೂ ಹೊಂದಿದ್ದಾನೆ. ಹೇಗೆ ಇದೆಲ್ಲ, ಹುಬ್ಬೇರಿಸುತ್ತಿದ್ದೀರಾ? ಈತ ಡೇಟಿಂಗ್ಗೂ ಹೋಗಿಲ್ಲ ಮದುವೆಯನ್ನೂ ಆಗಿಲ್ಲ. ಆದರೆ ಈತ ಮಾಡುತ್ತಿರುವುದು ಅಪರೂಪದ ಸಹಾಯ. ಕೈಲ್ ಗೊರ್ಡಿ ಎನ್ನುವ ಈ ವ್ಯಕ್ತಿ ಮಗುವಿಗಾಗಿ ಹಂಬಲಿಸುವ ಹೆಣ್ಣುಮಕ್ಕಳಿಗೆ ವೀರ್ಯದಾನ ಮಾಡುತ್ತಾನೆ. ಕೈಲ್ ಈ ಸೇವೆಯ ಕುರಿತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾನೆ. ಕುತೂಹಲವೆಂದರೆ, ಅವನು ವೀರ್ಯಬ್ಯಾಂಕ್‌ಗೆ ಹೋಗದೆ, ಅಗತ್ಯ ಇರುವ ಹೆಣ್ಣುಮಕ್ಕಳಿಗೆ ನೇರವಾಗಿಯೇ ವೀರ್ಯದಾನ ಮಾಡುತ್ತಾನೆ. ವೀರ್ಯಬ್ಯಾಂಕ್ಗಳಲ್ಲಿ ದಾನಿಗಳ ವಿವರ ಗುಟ್ಟಾಗಿ ಇಡುತ್ತಾರಾದ್ದರಿಂದ ಕೆಲ ಹೆಣ್ಣುಮಕ್ಕಳು ಅಜ್ಞಾತ ವ್ಯಕ್ತಿಯ ವೀರ್ಯ ಪಡೆಯಲು ಮನಸ್ಸು ಮಾಡುವುದಿಲ್ಲ. ಅಂಥವರು ಇವನಿಂದ ಸಹಾಯ ನಿರೀಕ್ಷಿಸುತ್ತಾರೆ.
ಅಮೆರಿಕದ ಲಾಸ್ ಎಂಜಲೀಸ್ನ ಕೈಲ್ಗೆ 31 ವರ್ಷ. ಇವನಿಂದಾಗಿ ಕಳೆದ 8 ವರ್ಷಗಳಲ್ಲಿ 48 ಹೆಣ್ಣುಮಕ್ಕಳು ತಾಯಂದಿರಾಗಿದ್ದಾರೆ. ಹೀಗೆ ಇತರರ ಕುಟುಂಬವು ಸಂತೋಷದಿಂದ ನೆಲೆಗೊಳ್ಳಲು ಸಹಾಯ ಮಾಡುತ್ತಿರುವ ಈ ವ್ಯಕ್ತಿಗೆ ಸ್ವಂತಕ್ಕೊಂದು ಸಂಬಂಧವನ್ನು ಹೊಂದುವುದು ಅಸಾಧ್ಯವಾಗಿದೆ ಎಂದರೆ ವಿಪರ್ಯಾಸ ಅಲ್ಲವೆ?
‘ಲೆಸ್ಬಿಯನ್ ದಂಪತಿಯ ಕೋರಿಕೆಯ ಮೇರೆಗೆ 8 ವರ್ಷಗಳ ಹಿಂದೆ ವೀರ್ಯ ದಾನವನ್ನು ಪ್ರಾರಂಭಿಸಿದೆ. ನಂತರ ಆನ್ಲೈನ್ನಲ್ಲಿ ಅನೇಕರು ವಿನಂತಿಸಿಕೊಂಡಾಗ ಪ್ರತಿಕ್ರಿಯಿಸಿ ಸ್ಪಂದಿಸುತ್ತಾ ಹೋದೆ. ಹೀಗೆ ನನ್ನ ವೀರ್ಯದಾನ ಪ್ರಕ್ರಿಯೆ ಶುರುವಾಯಿತು. ಆದರೆ, ನಾನು 10 ವರ್ಷಗಳಿಂದ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ನಾನು ವೀರ್ಯದಾನಿ ಎಂದು ಹುಡುಗಿಯರಿಗೆ ಪರಿಚಯಿಸಿಕೊಂಡಾಗ ಅವರು ನನ್ನ ಬಗ್ಗೆ ಆಸಕ್ತಿ ಕಳೆದುಕೊಂಡುಬಿಡುತ್ತಾರೆ. ಅಂದರೆ ಇತರೆ ಹೆಣ್ಣುಮಕ್ಕಳಿಗೆ ನಾನು ಸಹಾಯ ಮಾಡುತ್ತಿರುವುದು ಅರ್ಥವಾಗುತ್ತದೆ. ಆದರೆ, ಇಷ್ಟೊಂದು ಮಕ್ಕಳ ಹುಟ್ಟಿಗೆ ಕಾರಣನಾದ ನನ್ನೊಂದಿಗೆ ಹುಡುಗಿಯರು ಸಂಬಂಧವಿಟ್ಟುಕೊಳ್ಳಲು ಇಷ್ಟಪಡುತ್ತಿಲ್ಲ’ ಎನ್ನುವುದು ಕೈಲ್ ನೋವು.
ಹುಡುಗಿಯರ ದೃಷ್ಟಿಕೋನದಿಂದ ಯೋಚಿಸಿದಾಗ ಅವರವರಿಗೆ ಅವರ ಆಯ್ಕೆಗಳೂ ಇರುತ್ತವೆ ನಿಜ. ಆದರೆ ಸಹಾಯ, ಮಾನವೀಯತೆ, ಸಾಮಾಜಿಕ ಸೇವೆ ಎನ್ನುವುದು ಸ್ವಂತ ಸುಖಕ್ಕೆ ಮುಳುವಾಗುತ್ತದೆ ಎನ್ನುವುದೂ ಈ ವ್ಯಕ್ತಿಯ ಹಿನ್ನೆಲೆಯಿಂದ ನೋಡಿದಾಗ ಸತ್ಯವೇ. ಅದರಲ್ಲೂ ಈ ವಿಷಯ ಬಹಳ ಸೂಕ್ಷ್ಮ ಮತ್ತು ಸಂಕೀರ್ಣ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:11 pm, Tue, 16 August 22