
Viral Video : ಸಮೋಸಾ! ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆಯಲ್ಲ? ಇನ್ನು ಕಣ್ಣೆದುರಿಗಿದ್ದರಂತೂ ಹೇಗೆ ಸುಮ್ಮನಿರುವುದು? ಮಿನಿ ಸಮೋಸಾ ಆದರೆ ಒಂದೇ ಬಾರಿಗೆ ಗುಳುಂ. ಮಾಮೂಲಿ ಸಮೋಸಾ ಆದರೆ ಏಳೆಂಟು ತುತ್ತು. ಆದರೆ ಇಲ್ಲಿರುವ ಈ ಬಡಾ ಸಮೋಸಾ! ಎಲ್ಲಿಂದ ಎತ್ತಕಡೆಯಿಂದ ಯಾವ ತುದಿಯಿಂದ ಯಾವ ಅಂಗುಲದಿಂದ ತಿನ್ನುತ್ತೀರಿ? ಅದೂ ಒಬ್ಬರೇ ಅಂತೂ ತಿನ್ನಲು ಸಾಧ್ಯವೇ ಇಲ್ಲ. ಆದರೆ ಇದನ್ನು ಒಬ್ಬರೇ ತಿನ್ನಬೇಕು ಎಂಬ ಶರತ್ತು ಬೇರೆ ವಿಧಿಸಿದೆ ಇದನ್ನು ತಯಾರಿಸಿದ ಮೀರತ್ನ ಸಿಹಿಯಂಗಡಿ. ಉದ್ಯಮಿ ಹರ್ಷ ಗೋಯೆಂಕಾ, ಟ್ವೀಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ.
ಬರೋಬ್ಬರಿ 8 ಕೆ.ಜಿ ತೂಗುವ ಈ ಸಮೋಸಾ ಖಂಡಿತ ಒಬ್ಬರೇ ತಿನ್ನಲು ಸಾಧ್ಯವಿಲ್ಲ ಅಲ್ಲವಾ? ಮೀರತ್ನ ಕೌಶಲ್ ಸ್ವೀಟ್ಸ್ ಎಂಬ ಅಂಗಡಿಯಲ್ಲಿ ಈ ಸಮೋಸಾ ತಯಾರಾಗಿದೆ. ಇದನ್ನು ಇನ್ಸ್ಟಾಗ್ರಾಂನಲ್ಲಿ ಮೊದಲಿಗೆ ಹಂಚಿಕೊಂಡಿದ್ದು ಫುಡ್ ಬ್ಲಾಗರ್ ಚಾಹತ್ ಆನಂದ. ಇನ್ನೇನು ಈ ಸಮೋಸಾ ನೋಡಿದವರ ಸಂಖ್ಯೆ 5 ಲಕ್ಷಕ್ಕೆ ಏರುತ್ತದೆ.
ನೆಟ್ಟಿಗರು ಸಮೋಸಾ ತಿಂದರೆ ಆರೋಗ್ಯ ಏರುಪೇರಾಗುವುದು ಖಚಿತ ಎನ್ನುತ್ತಿದ್ದಾರೆ. ಹಾಗೆಂದು ಜೀವನಪೂರ್ತಿ ನೀವು ಸಮೋಸಾ ತಿಂದೇ ಇಲ್ಲವೇ? ಎಂದು ಇನ್ನೊಬ್ಬರು ಕೇಳಿದ್ದಾರೆ. ಆದರೆ, ಕೌಶಲ್ ಸ್ವೀಟ್ಸ್ ಈ ಸಮೋಸಾವನ್ನು ಪ್ರದರ್ಶನಕ್ಕೆ ಮಾಡಿದ್ದಲ್ಲ. ಜುಲೈನಲ್ಲಿ ಸ್ಪರ್ಧೆಗಾಗಿ ಮಾಡಿತ್ತು. 30 ನಿಮಿಷದೊಳಗೆ ಒಂದೇ ಏಟಿಗೆ ಒಬ್ಬರೇ ಈ ಸಮೋಸಾ ತಿಂದರೆ ರೂ. 51,000 ನಗದು ಬಹುಮಾನ ಕೊಡಲಾಗುವುದೆಂದು ಘೋಷಿಸಿತ್ತು.
ಹಳೆಯ ವಿಡಿಯೋ ಈ ದೀಪಾವಳಿ ಸಮಯದಲ್ಲಿ ವೈರಲ್ ಆಗಿದೆ.
ನೀವು ಪ್ರಯತ್ನಿಸಬೇಕು ಎಂದುಕೊಂಡಿದ್ದಿರಾ ಹೇಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:29 pm, Fri, 28 October 22