ಬಾಲ್ಯವೆಂದರೆ ಹಾಗೆಯೇ ಆಗ ತಾನೇ ಲೋಕವನ್ನು ಬೆರಗುಗಣ್ಣುಗಳಿಂದ ನೋಡುವ ವಯಸ್ಸು. ಚಿಕ್ಕವರಿದ್ದಾಗ ನಮಗೆ ಪ್ರತಿಯೊಂದು ಸಂಗತಿಗಳೂ ಕುತೂಹಲ ಹುಟ್ಟುಹಾಕುತ್ತವೆ. ಕೆಲವೊಮ್ಮೆ ಆ ಕುತೂಹಲಗಳೇ ಹೊಸ ಪಾಠವನ್ನೂ ಕಲಿಸುತ್ತವೆ. ಮೊದಲ ಮಿಂಚು, ಗುಡುಗು, ಮಳೆ, ಪ್ರವಾಸ, ಮೊದಲ ಬಾರಿಗೆ ಕಂಡ ಕಡಲು, ಆಕಾಶದಲ್ಲಿ ಹಾರುತ್ತಾ ಹಕ್ಕಿಯಂತೆ ಕಂಡ ವಿಮಾನ.. ಹೀಗೆ ಅಚ್ಚರಿ ಹುಟ್ಟಿಸಿದ ಸಂಗತಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅಂದಹಾಗೆ, ಈ ಕೌತುಕ ಮನುಷ್ಯರಿಗೆ ಮಾತ್ರ ಸೀಮಿತವೇನಲ್ಲ. ಸಕಲ ಪ್ರಾಣಿಗಳೂ ಈ ಅನುಭವದಲ್ಲಿ ಮಿಂದೇಳುತ್ತವೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮುದ್ದಾದ ವಿಡಿಯೋವೊಂದು ಇಷ್ಟೆಲ್ಲಾ ಮೆಲುಕು ಹಾಕಲು ಕಾರಣವಾಗಿದೆ. ಮನೆಯಿಂದಾಚೆ ಸುರಿಯುತ್ತಿದ್ದ ಹಿಮವನ್ನು ಬೆಕ್ಕುಗಳೆರಡು ಗಾಜಿನ ಬಾಗಿಲ ಹಿಂದೆ ಕುಳಿತು ಬೆರಗಿನಿಂದ ನೋಡುತ್ತಿರುವ ದೃಶ್ಯ ಎಲ್ಲರ ಮನಸೂರೆಗೊಂಡಿದೆ. ವಿಡಿಯೋಕ್ಕೆ ನೀಡಲಾದ ಕ್ಯಾಪ್ಷನ್ನಲ್ಲಿ ತಿಳಿಸಿರುವಂತೆ ಕೋಮಾ ಮತ್ತು ಕೊಕೊಟಾ ಎಂಬ ಬೆಕ್ಕುಗಳು ಹಿಮಪಾತವನ್ನು ಅಚ್ಚರಿಯಿಂದ ನೋಡುತ್ತಿದ್ದು, ಅದರಲ್ಲಿ ಪುಟಾಣಿ ಬೆಕ್ಕಂತೂ ಚಿಕ್ಕ ಮಗುವಿನಿಂತೆಯೇ ಅತ್ತಿತ್ತ ತನ್ನ ಚೋಟು ಬೀಸುತ್ತಾ, ಹಿಂಗಾಲಿನಿಂದ ನಿಂತು ಆಚೆ ನೋಡುತ್ತಾ ಮನಸ್ಸು ಗೆಲ್ಲುತ್ತದೆ.
@Kosuke_maeda0103 ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಸ್ವತಃ ಇನ್ಸ್ಟಾಗ್ರಾಂ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಕರನ್ನು ಸೆಳೆದುಕೊಂಡಿದೆ. ವಿಡಿಯೋ ನೋಡಿದ ಬಹುತೇಕರು ಬೆಕ್ಕುಗಳ ಮುಗ್ಧತೆಗೆ ಮಾರುಹೋಗಿದ್ದು, ಅವುಗಳ ಕುರಿತು ತಮ್ಮ ಪ್ರೀತಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು
ಕೂಲರ್‌ನಿಂದ ತಂಪಾದ ನೀರು ಕುಡಿಯುತ್ತಿರುವ ಬೆಕ್ಕು! ವಿಡಿಯೋ ಸಿಕ್ಕಾಪಟ್ಟೆ ವೈರಲ್