Trending : ಯಾವ ಕೆಲಸವೂ ಮೇಲುಕೀಳಲ್ಲ. ಹಾಗೆಯೇ ಯಾರು ಯಾವ ಕೆಲಸದಲ್ಲಿಯೇ ತೊಡಗಿಕೊಂಡಿರಲಿ, ಅವರನ್ನು ಸಮಾನವಾಗಿ ಕಾಣಬೇಕು. ಆದರೆ ನಾವಿರುವ ಪರಿಸರದಲ್ಲಿ ಅಥವಾ ನಮ್ಮ ಸುತ್ತಮುತ್ತಲೂ ಇದು ಅನ್ವಯವಾಗುತ್ತಿದೆಯಾ? ಒಬ್ಬ ಪ್ರೊಫೆಸರ್, ಆಫೀಸರ್, ಲಾಯರ್ ಇವರನ್ನೆಲ್ಲ ಸಂಬೋಧಿಸುವ ರೀತಿನೀತಿ ಹೇಗಿರುತ್ತದೆ ಮತ್ತು ಹೋಟೆಲ್ಗೆ ಹೋಗಿ ಅಲ್ಲಿಯ ವೇಟರ್ಗೆ ಆರ್ಡರ್ ಮಾಡುವಾಗಿನ ಧರ್ತಿ ಹೇಗಿರುತ್ತದೆ… ಇದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ ಅಲ್ಲವಾ? ಈ ವಿಷಯಕ್ಕೆ ಸಂಬಂಧಿಸಿದ ಒಂದು ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದೆ.
ಅಮೆರಿಕದ ಕೆಫೆಯೊಂದರಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಗೌರವಯುತವಾಗಿ, ಸೌಜನ್ಯದಿಂದ ವರ್ತಿಸುತ್ತಾನೆ ಎನ್ನುವುದರ ಮೇಲೆ ಅವನ ಬಿಲ್ ನಿಗದಿಯಾಗುತ್ತದೆ. ಇದು ವಿಚಿತ್ರವಾದರೂ ಸತ್ಯ. ಸಾಕಷ್ಟು ಗ್ರಾಹಕರು ತಮ್ಮ ಮೂಡ್ಗೆ ತಕ್ಕಂತೆಯೋ ಅಥವಾ ವೇಟರ್ಗಳು ತಮ್ಮ ಪರಿಚಾರಕರು ಎಂಬ ಮೇಲರಿಮೆಯಲ್ಲಿಯೋ ಅವರೊಂದಿಗೆ ಬಹಳ ಹಗೂರವಾಗಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ನಡೆವಳಿಕೆಯ ವಿಷಯವಾಗಿ ಜಗಳಗಳೂ ನಡೆಯುತ್ತವೆ. ಹೀಗಾದಾಗ ಅಲ್ಲಿಯ ವಾತಾವರಣದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಉಳಿದವರ ಮೂಡ್ ಕೂಡ ಹಾಳಾಗುವ ಸಂಭವವಿರುತ್ತದೆ. ಜೊತೆಗೆ ವ್ಯಾಪರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.
ಹಾಗಾಗಿ ಅಮೆರಿಕದ ಕೆಫೆಯೊಂದರಲ್ಲಿ ಇದಕ್ಕೆ ಹೊಸ ಉಪಾಯವನ್ನು ಕಂಡುಕೊಳ್ಳಲಾಗಿದೆ. ಗ್ರಾಹಕರ ಸಭ್ಯತನಕ್ಕೆ ಅನುಗುಣವಾಗಿ ಇಲ್ಲಿ ಬಿಲ್ ನಿಗದಿ ಮಾಡಲಾಗುತ್ತದೆ. ಈ ಮೂಲಕ ಗ್ರಾಹಕರ ವರ್ತನೆಯಲ್ಲಿ ಉತ್ತಮ ಬದಲಾವಣೆಯನ್ನು ತರುವುದು ಕೆಫೆಯ ಉದ್ದೇಶವಾಗಿದೆ. ಆದ್ದರಿಂದ ಇಲ್ಲಿ ಅಗೌರವ, ಅಸಭ್ಯತನದಿಂದ ವರ್ತಿಸುವ ಗ್ರಾಹಕರಿಗೆ ದುಪ್ಪಟ್ಟು ಬಿಲ್. ಸೌಜನ್ಯದಿಂದ ವರ್ತಿಸುವ ಗ್ರಾಹಕರಿಗೆ ರಿಯಾಯ್ತಿ.
Chaii Stop ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಈ ಆಲೋಚನೆ ಬಹಳ ಇಷ್ಟವಾಯಿತು ಎಂದು ನೆಟ್ಟಿಗರು ಪ್ರಶಂಸಿಸಿದ್ಧಾರೆ. ಇದಕ್ಕಿಂತ ಉತ್ತಮವಾದ ಉಪಾಯ ಇನ್ನೊಂದಿಲ್ಲ ಇದು ಮುಂದುವರಿಯಲಿ ಎಂದಿದ್ದಾರೆ ಒಬ್ಬರು. ಅದ್ಭುತವಾದ ಐಡಿಯಾ ಇದು, ಬಹಳ ಸೂಕ್ಷ್ಮವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ನಿಮಗೇನು ಅನ್ನಿಸುತ್ತದೆ ಈ ವಿಷಯವಾಗಿ? ಭಾರತದಲ್ಲಿ ಇಂಥದೊಂದು ಆಲೋಚನೆ ಜಾರಿಗೆ ಬಂದರೆ ಹೇಗಿರುತ್ತದೆ?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:51 pm, Mon, 17 October 22