ಉಕ್ರೇನ್ನಲ್ಲಿ ರಷ್ಯಾ ಯುದ್ಧ ಸಾರಿ ತಿಂಗಳುಗಳೇ ಕಳೆದುಹೋಗಿದೆ. ಇಷ್ಟು ದಿನಗಳಲ್ಲಿ ಪ್ರಾಣಕಳೆದುಕೊಂಡವರು, ಗಾಯಗೊಂಡವರು, ಅನಾಥರಾದವರು, ದೇಶಬಿಟ್ಟು ಹೋದವರು, ನಿರ್ಗತಿಕರಾದವರು ಅದೆಷ್ಟೋ ಜನ. ಇದೆಲ್ಲದರ ಮಧ್ಯೆ ಉಕ್ರೇನ್ನಲ್ಲಿ ಮನಮಿಡಿಯುವ ಘಟನೆಗಳು ನಡೆಯುತ್ತಿವೆ. ಅದರ ವಿಡಿಯೋಗಳು ವೈರಲ್ ಆಗುವ ಜತೆಗೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗುತ್ತಿದೆ. ಅದೇ ರೀತಿ ರಷ್ಯಾ ಸೇನೆ ಮಾರ್ಚ್ನಲ್ಲಿ ನಡೆಸಿದ್ದ ನೆಲಬಾಂಬ್ ಸ್ಫೋಟದಿಂದಾಗಿ ಕಾಲುಗಳನ್ನು ಮತ್ತು ಕೈಯಿಯ ನಾಲ್ಕು ಬೆರಳುಗಳನ್ನು ಕಳೆದುಕೊಂಡಿದ್ದ ನರ್ಸ್ವೊಬ್ಬರು ಈಗ ತನ್ನ ಪ್ರಿಯಕರನೊಂದಿಗೆ ಮದುವೆಯಾದ ವಿಡಿಯೋ ವೈರಲ್ ಆಗುತ್ತಿದ್ದು, ಇದು ಮನಕಲಕುವಂತಿದೆ. ಕಾಲಿಲ್ಲದ ಯುವತಿಯನ್ನು, ಆಕೆಯ ಪತಿ, ಪುಟ್ಟ ಮಗುವಿನಂತೆ ಎತ್ತಿಕೊಂಡು, ಮುದ್ದಾಡುತ್ತ ನೃತ್ಯ ಮಾಡಿದ ಭಾವನಾತ್ಮಕವಾದ ವಿಡಿಯೋ ಇದು.
ಈ ಜೋಡಿಯ ವಿಡಿಯೋವನ್ನು ಕಾರ್ಯತಂತ್ರದ ಸಂವಹನ ಮತ್ತು ಮಾಹಿತಿ ಭದ್ರತಾ ಕೇಂದ್ರ ಶೇರ್ ಮಾಡಿಕೊಂಡಿದೆ. ಈ ಕೇಂದ್ರ ಉಕ್ರೇನ್ನ ಸಂಸ್ಕೃತಿ ಮತ್ತು ಮಾಹಿತಿ ನೀತಿ ಸಚಿವಾಲಯಕ್ಕೆ ಸೇರಿದ ಸಂಸ್ಥೆಯೇ ಆಗಿದ್ದು, ಯುದ್ಧಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತದೆ. ನರ್ಸ್ ಹೆಸರು ಒಕ್ಸಾನಾ ಎಂದಾಗಿದ್ದು, ಆಕೆಯ ಪತಿ ವಿಕ್ಟರ್. ಇವರಿಬ್ಬರದ್ದೂ ಆರು ವರ್ಷಗಳ ಪ್ರೀತಿ. ಮದುವೆಯಾಗದೆ ಇದ್ದರೂ ಇಬ್ಬರು ಮಕ್ಕಳಿದ್ದಾರೆ. ಎಲ್ವಿವ್ನ ಆಸ್ಪತ್ರೆಯಲ್ಲಿ ಇಬ್ಬರೂ ವಿವಾಹವಾಗಿದ್ದು, ಮಕ್ಕಳೂ ಇದ್ದರು.
ಇವರ ಮದುವೆಗಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವೆಡ್ಡಿಂಗ್ ಕೇಕ್ ಕೂಡ ತಯಾರಾಗಿತ್ತು. ಎಲ್ಲವನ್ನೂ ಆಸ್ಪತ್ರೆಯ ಸಿಬ್ಬಂದಿಯೇ ಖುದ್ದಾಗಿ ನಿಂತು ಮಾಡಿದ್ದರು. ಮದುಮಗಳು ಬಿಳಿಬಣ್ಣದ ಉಡುಪು ತೊಟ್ಟು, ಉಕ್ರೇನಿಯನ್ ಸಂಪ್ರದಾಯದ ಹೂವಿನ ಕಿರೀಟ ತೊಟ್ಟಿದ್ದಳು. ಮುಂದಿನ ದಿನಗಳಲ್ಲಿ ಒಕ್ಸಾನಾ ಪ್ರೊಸ್ಥೆಟಿಕ್ ಮೂಲಕ ಕೃತಕ ಕಾಲುಗಳನ್ನು ಪಡೆಯಬಹುದು. ಆದರೆ ಅವರ ಗಾಯ ಸಂಪೂರ್ಣವಾಗಿ ಒಣಗಿದ ಬಳಿಕವಷ್ಟೇ ಈ ಕೃತಕ ಕಾಲುಗಳ ಜೋಡಣೆ ಸಾಧ್ಯ ಎಂದು ಆಸ್ಪತ್ರೆಯಲ್ಲಿ ಹೇಳಲಾಗಿದೆ. ಹೀಗಾಗಿ ಇವರಿಬ್ಬರೂ ಜರ್ಮನಿಗೆ ಹೋಗಲಿದ್ದಾರೆ ಎಂದೂ ಹೇಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
❤️?? Very special lovestory.
A nurse from Lysychansk, who has lost both legs on a russian mine, got married in Lviv. On March 27, Victor and Oksana were coming back home, when a russian mine exploded. The man was not injured, but Oksana’s both legs were torn off by the explosion. pic.twitter.com/X1AQNwKwyu— Verkhovna Rada of Ukraine – Ukrainian Parliament (@ua_parliament) May 2, 2022
ಇದನ್ನೂ ಓದಿ: ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಓಂಕಾರ ಅಭಿಯಾನ ನಡೆಯುತ್ತೆ -ಪ್ರಮೋದ್ ಮುತಾಲಿಕ್
Published On - 1:48 pm, Thu, 5 May 22