Viral: ನವಜಾತ ಶಿಶು ಮತ್ತು ಪತ್ನಿಯನ್ನು ಆಸ್ಪತ್ರೆಯಿಂದ ಕರೆತರಲು ತನ್ನ ಮೊದಲ ಮಗುವನ್ನೇ ಮಾರಾಟ ಮಾಡಿದ ತಂದೆ
ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ನವಜಾತ ಶಿಶು ಮತ್ತು ಬಾಣಂತಿ ಪತ್ನಿಯನ್ನು ಆಸ್ಪತ್ರೆಯಿಂದ ಕರೆತರಲು ಹಣವಿಲ್ಲ ಎಂದು ವ್ಯಕ್ತಿಯೊಬ್ಬ ಆಸ್ಪತ್ರೆಯ ಸಿಬ್ಬಂದಿಗಳ ಬಲವಂತದ ಮೇರೆಗೆ ತನ್ನ ಮೂರು ವರ್ಷದ ಮಗನನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಗುವನ್ನು ರಕ್ಷಿಸಿ ಐವರನ್ನು ಬಂಧಿಸಿದ್ದಾರೆ.
ಕಿತ್ತು ತಿನ್ನುವ ಬಡತನ ಎಂತಹವರನ್ನೂ ಅಸಹಾಯಕರನ್ನಾಗಿ ಮಾಡುತ್ತದೆ. ಇದಕ್ಕೆ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಆಸ್ಪತ್ರೆಯ ಬಿಲ್ ಕಟ್ಟಲಾಗದೆ ತಂದೆಯಾದವನು ತನ್ನ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ್ದಾನೆ. ಹೌದು ಬಾಣಂತಿ ಪತ್ನಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಯಿಂದ ಬಿಡಿಸಲು ಹಣವಿಲ್ಲ ಎಂದು ಇಲ್ಲೊಬ್ಬ ವ್ಯಕ್ತಿ ತನ್ನ ಮೂರು ವರ್ಷದ ಮಗುವನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ವಿಷಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಮಗುವನ್ನು ರಕ್ಷಣೆ ಮಾಡಿ ಈ ಕೃತ್ಯದಲ್ಲಿ ಭಾಗಿಯಾದ ಐವರನ್ನು ಬಂಧಿಸಲಾಗಿದೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದ್ದು, ತಂದೆಯೇ ತನ್ನ ಹೆತ್ತ ಮಗನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಬರ್ವಾ ಪಟ್ಟಿಯ ನಿವಾಸಿ ಹರೀಶ್ ಪಟೇಲ್ ಎಂಬಾತ ಹೆರಿಗೆಗಾಗಿ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆಸ್ಪತ್ರೆಯಲ್ಲಿ ನಾಲ್ಕು ಸಾವಿರ ಬಿಲ್ ಆಗಿದ್ದು, ಬಿಲ್ ಕಟ್ಟದೆ ಪತ್ನಿ ಮತ್ತು ನವಜಾತ ಶಿಶುವನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆಯ ಸಿಬ್ಬಂದಿಗಳು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಕಪ್ಪು ಬ್ಯಾಗ್ ಧರಿಸಿ ವ್ಲಾಗ್ ಮಾಡಲು ಬಂದ ಯುಟ್ಯೂಬರ್; ಭಯೋತ್ಪಾದಕನೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಗ್ರಾಮಸ್ಥರು
ಕೂಲಿ ಕೆಲಸ ಮಾಡುತ್ತಿದ್ದ ಆತನ ಕೈಯಲ್ಲಿ ಅಷ್ಟು ಮೊತ್ತದ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಚಿಂತೆಗೊಳಗಾದ ಆತ ಆಸ್ಪತ್ರೆಯಲ್ಲಿದ್ದ ಕೆಲವರ ಸಲಹೆಯ ಮೇರೆಗೆ ಬಲವಂತವಾಗಿ ಮಗುವನ್ನು ಕೇವಲ 20 ಸಾವಿರ ರೂಪಾಯಿಗೆ ನಕಲಿ ದತ್ತು ದಾಖಲೆಯಡಿ ಬೇರೊಬ್ಬ ದಂಪತಿಗೆ ಮಾರಾಟ ಮಾಡಿದ್ದಾನೆ.ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿ ಮಗುವನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಸಪ್ಟೆಂಬರ್ 7 ರಂದು ಈ ಘಟನೆ ನಡೆದಿದ್ದು, ಮಗು ಮಾರಾಟ ಮಾಡುವ ಈ ಕೃತ್ಯದಲ್ಲಿ ಭಾಗಿಯಾದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ