
Viral Video : ಇಷ್ಟುವರ್ಷಗಳಲ್ಲಿ ಇಂಥ ಅದೆಷ್ಟು ವಿಡಿಯೋಗಳು ವೈರಲ್ ಆಗಿವೆಯೋ ಏನೋ. ಆದರೂ ನಮ್ಮ ಜನ ಪಾನಿಪುರಿ, ಗೋಲ್ಗಪ್ಪಾ, ಸಮೋಸಾ, ದಹೀಪುರಿ ಹೀಗೆ ಸ್ಟ್ರೀಟ್ ಚಾಟ್ನ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ. ಸಣ್ಣಪುಟ್ಟ ಅಂಗಡಿಗಳಿಗೆ ಪೂರೈಕೆಯಾಗುವ ಖಾದ್ಯಗಳನ್ನು ಎಂಥ ಸ್ಥಳದಲ್ಲಿ ತಯಾರಿಸುತ್ತಾರೆ ಎಂಬ ಚಿತ್ರಣವನ್ನು ಇಲ್ಲಿ ವಿವರಿಸುವುದು ಅನಗತ್ಯ ಎನ್ನಿಸುತ್ತದೆ. ಏಕೆಂದರೆ ಈ ಹಿಂದೆ ನೋಡಿದ ವಿಡಿಯೋಗಳ ತುಣುಕುಗಳು ನಿಮ್ಮ ನೆನಪಿನ ಕೋಶದಲ್ಲಿ ಚೆನ್ನಾಗಿಯೇ ಅಚ್ಚಾಗಿರಲು ಸಾಕು. ಈಗ ವೈರಲ್ ಆಗಿರುವ ದೃಶ್ಯಗಳನ್ನು ನೋಡಿ. ದೃಶ್ಯ 1 : ಇಬ್ಬರು ಯುವಕರು ಹಿಟ್ಟನ್ನು ಪಾದಗಳಿಂದ ತುಳಿದು ಹದ ಮಾಡುತ್ತಿದ್ದಾರೆ. ದೃಶ್ಯ 2 : ದೊಡ್ಡ ಬಾಣಲೆಯಲ್ಲಿರುವ ಎಣ್ಣೆಯಲ್ಲಿ ಬಿದ್ದ ಇಲಿ ಹೊರಬರಲು ಆಗದೆ ಬಿದ್ದು ಹೊರಳಾಡುತ್ತಿದೆ.
ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಹಾ ಅಂಗಡಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಅಷ್ಟೇ ಅಲ್ಲ ಅಂಗಡಿಯನ್ನು ಸೀಲ್ ಮಾಡಿದ್ದಾರೆ. ಆರೋಪಿಯನ್ನು ಬಡಗಾಮ್ನ ಓಂಪುರಾದ ಇಮ್ರಾನ್ ಹೋಟೆಲ್ನ ಇಮ್ರಾನ್ ಹುಸೇನ್ ಹಲ್ವಾಯಿ ಎಂದು ಗುರುತಿಸಲಾಗಿದೆ.
ಬಡಗಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಶುಚಿರಹಿತ ವಾತಾವರಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಕ್ಕಾಗಿ ಸ್ಥಳೀಯರು ಪೊಲೀಸರನ್ನು ಶ್ಲಾಘಿಸಿದ್ದಾರೆ.
ರಸ್ತೆಬದಿಯ ತಿಂಡಿಗಳ ರುಚಿಗೆ ಮಾರುಹೋಗುವವರು ಇನ್ನಾದರೂ ಯೋಚಿಸಿ. ಎಲ್ಲಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿದುಕೊಂಡು ತಿನ್ನುವಂತಿದ್ದರೆ ಸರಿ. ಇಲ್ಲವಾದಲ್ಲಿ ಅನಾರೋಗ್ಯ ತಪ್ಪಿದ್ದಲ್ಲ.
ಒಂದು ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:29 am, Mon, 26 September 22