ಕೊವಿಡ್ ಪಾಸಿಟಿವ್​ ಆಗಿ ನರಳುತ್ತಿರುವ ತಂದೆಗೆ ನೀರು ಕುಡಿಸಲು ಹೊರಟ ಮಗಳು, ತಡೆಹಿಡಿಯುತ್ತಿರುವ ತಾಯಿ; ಮನಕಲಕುವ ವಿಡಿಯೋ

ಗ್ರಾಮಸ್ಥರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ, 17 ವರ್ಷದ ಮಗಳು ಕೊವಿಡ್​ ಪಾಸಿಟಿವ್​ನಿಂದ ಬಳಲುತ್ತಿದ್ದ ತನ್ನ ತಂದೆಗೆ ಬಾಟಲಿಯಲ್ಲಿ ನೀರು ಕುಡಿಸಲು ಅಳುತ್ತಾ ಮುನ್ನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಮಗಳಿಗೆಲ್ಲಿ ಕೊರೊನಾ ಹರಡುತ್ತದೋ ಎಂಬ ಭಯದಿಂದ ತಾಯಿ ಮಗಳನ್ನು ತಡೆಯುತ್ತಾರೆ.

  • TV9 Web Team
  • Published On - 10:30 AM, 5 May 2021
ಕೊವಿಡ್ ಪಾಸಿಟಿವ್​ ಆಗಿ ನರಳುತ್ತಿರುವ ತಂದೆಗೆ ನೀರು ಕುಡಿಸಲು ಹೊರಟ ಮಗಳು, ತಡೆಹಿಡಿಯುತ್ತಿರುವ ತಾಯಿ; ಮನಕಲಕುವ ವಿಡಿಯೋ
ತಂದೆಗೆ ಮಗಳು ನೀರು ಕುಡಿಸಲು ಹೊರಟಿರುವ ದೃಶ್ಯ

ಕೊರೊನಾದಿಂದ ಅದೆಷ್ಟೋ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಕುಟುಂಬದವರನ್ನು, ಆಪ್ತರನ್ನು, ಜತೆಗಾರರನ್ನು ಕಳೆದುಕೊಂಡವರಿಗೆ ಲೆಕ್ಕವೇ ಇಲ್ಲ. ಇನ್ನು ಕೆಲವರಿಗೆ ಎಲ್ಲರೂ ಇದ್ದರೂ ಯಾರೂ ಇಲ್ಲವೆಂಬ ಪರಿಸ್ಥಿತಿ ಎದುರಾಗಿದೆ. ಕಣ್ಣೆದುರಿಗೆ ತಮ್ಮ ಸಂಬಂಧಿಕರು, ಕುಟುಂಬಸ್ಥರು ಕಾಣಿಸುತ್ತಿದ್ದರೂ ಕೂಡಾ ಮಾತನಾಡಲಾಗದ, ಕುಡಿಯಲು ಒಂದು ತೊಟ್ಟು ನೀರೂ ಕೊಡಲಾಗದ ಮಟ್ಟಿಗೆ ಕೊವಿಡ್​ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಂತಹದ್ದೇ ಒಂದು ಮನಕಲಕುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಕೊರೊನಾ ಸೋಂಕಿನಿಂದ ಬಳಲಿ ಕೊನೆಕ್ಷಣ ಎಣಿಸುತ್ತಿರುವ ತಂದೆಗೆ ಮಗಳು ನೀರು ಕುಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡುಗರ ಕರುಳು ಹಿಂಡುತ್ತದೆ.

ಆಂಧ್ರಪ್ರದೇಶದ 50 ವರ್ಷದ ವ್ಯಕ್ತಿಯೋರ್ವರು ವಿಜಯವಾಡದಲ್ಲಿ ಕೆಲ ನಿರ್ವಹಿಸುತ್ತಿರುತ್ತಾರೆ. ಕೊವಿಡ್​ ಪರೀಕ್ಷೆಯ ಬಳಿಕೆ ಅವರಿಗೆ ಪಾಸಿಟಿವ್​ ಇರುವುದು ದೃಢವಾಗಿದೆ. ಹೀಗಾಗಿ ಅವರು ತನ್ನ ಸ್ವಂತ ಗ್ರಾಮಕ್ಕೆ ಹಿಂತಿರುಗಿದ್ದಾರೆ. ಆದರೆ ಕೊವಿಡ್​ ಪಾಸಿಟಿವ್​ ಇರುವುದರಿಂದ ಗ್ರಾಮಸ್ಥರು ಅವರನ್ನು ಸೇರಿಸಿಕೊಳ್ಳಲು ಹಿಂಜರಿದ ಕಾರಣ ಅಲ್ಲೇ ಪಕ್ಕದ ಗುಡಿಸಲಿನಲ್ಲಿ ವಾಸ್ತವ್ಯ ಹೂಡುವ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಗ್ರಾಮಸ್ಥರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ, 17 ವರ್ಷದ ಮಗಳು ಕೊವಿಡ್​ ಪಾಸಿಟಿವ್​ನಿಂದ ಬಳಲುತ್ತಿದ್ದ ತನ್ನ ತಂದೆಗೆ ಬಾಟಲಿಯಲ್ಲಿ ನೀರು ಕುಡಿಸಲು ಅಳುತ್ತಾ ಮುನ್ನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಮಗಳಿಗೆಲ್ಲಿ ಕೊರೊನಾ ಹರಡುತ್ತದೋ ಎಂಬ ಭಯದಿಂದ ತಾಯಿ ಮಗಳನ್ನು ತಡೆಯುತ್ತಾರೆ. ಇನ್ನೇನು ಮಗಳು ನೀರು ಕುಡಿಸಬೇಕು ಅನ್ನುವಷ್ಟರಲ್ಲಿ ತಂದೆ ನೆಲದ ಮೇಲೆ ಕುಸಿದು ಬೀಳುತ್ತಾರೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಯಾವುದೇ ಆಸ್ಪತ್ರೆಗಳಾಗಲೀ, ಬೆಡ್​ಗಳಾಗಲೀ ಲಭ್ಯವಿಲ್ಲ ಎಂದು ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಮಾತನಾಡುವುದು ಕೇಳಿ ಬರುತ್ತದೆ. ಇದಾದ ಸ್ವಲ್ಪ ಸಮಯದಲ್ಲೆಯೇ ಆ ವ್ಯಕ್ತಿಯು ನಿಧನರಾಗಿರುವುದಾಗಿ ತಿಳಿದುಬಂದಿದೆ.

ಈ ಮನಕಲಕುವ ದೃಶ್ಯ, ಕೊವಿಡ್​ ಉಂಟುಮಾಡಿರುವ ಗಂಭೀರತೆಗೆ ಸಾಕ್ಷಿಯಾಗಿದೆ. ಆಂಧ್ರಪ್ರದೇಶದಲ್ಲಿ ಒಂದು ದಿನದಲ್ಲಿ 20,000 ಪ್ರಕರಣಗಳು ದಾಖಲಾಗಿದ್ದು,  71 ಜನ​ ಸೋಂಕಿಗೆ ಬಲಿಯಾಗಿದ್ದಾರೆ.  ಈವರೆಗೆ ರಾಜ್ಯದಲ್ಲಿ 11 ಲಕ್ಷ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಇಂತಹದ್ದೇ ಇನ್ನೊಂದು ಘಟನೆ ನಡೆದಿದ್ದು, ನಂದಿಗ್ರಾಮದ 55 ವರ್ಷದ ಮಹಿಳೆಯೋರ್ವರು ಅತಿಯಾದ ಜ್ವರ, ಕೆಮ್ಮಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಭಾನುವಾರ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ನರ್ಸ್​, ವೈದ್ಯರ ಜಗಳ; ಕಪಾಳಮೋಕ್ಷ ಮಾಡಿ ನಿಂದಿಸಿದ ವಿಡಿಯೋ ವೈರಲ್​

(video shows daughter trying to give water for covid 19 positive father stopped by mother in andhra pradesh)