Viral News: ಮದುಮಗ ಶೇರ್ವಾನಿ ಧರಿಸಿದ್ದೇ ತಪ್ಪಾಯ್ತು!; ಮಂಟಪದಲ್ಲಿ ಕಲ್ಲಿನಿಂದ ಹೊಡೆದು ವಧುವಿನ ಮನೆಯವರ ಗಲಾಟೆ
ಮದುಮಗ ತಮ್ಮ ಬುಡಕಟ್ಟು ಸಂಪ್ರದಾಯದಂತೆ 'ಧೋತಿ-ಕುರ್ತಾ' ಧರಿಸಬೇಕೆಂದು ವಧುವಿನ ಸಂಬಂಧಿಕರು ಒತ್ತಾಯಿಸಿದ್ದರು. ಇದಕ್ಕೆ ವರ ಒಪ್ಪಿರಲಿಲ್ಲ.
ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬುಡಕಟ್ಟು ವರನೊಬ್ಬ ತನ್ನ ಮದುವೆಯಲ್ಲಿ ‘ಶೇರ್ವಾನಿ’ ಧರಿಸಿದ್ದೇ ದೊಡ್ಡ ಗಲಾಟೆಗೆ ಕಾರಣವಾಗಿದೆ. ಮದುಮಗ ಧೋತಿ- ಕುರ್ತಾ ಧರಿಸುವ ಬದಲು ಶೇರ್ವಾನಿ ಧರಿಸಿರುವುದನ್ನು ನೋಡಿದ ವಧುವಿನ ಕುಟುಂಬಸ್ಥರು ಮಂಟಪದಲ್ಲೇ ಗಲಾಟೆ ಮಾಡಿದ್ದಾರೆ. ಶೇರ್ವಾನಿ ಆ ಮದುವೆಯಲ್ಲಿ ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಯಿತು. ಇದಾದ ನಂತರ ಎರಡು ಕಡೆಯ ಕುಟುಂಬಸ್ಥರು ಜಗಳವಾಡಿಕೊಂಡು, ಪರಸ್ಪರ ಕಲ್ಲು ಎಸೆದು ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮದುಮಗ ತಮ್ಮ ಬುಡಕಟ್ಟು ಸಂಪ್ರದಾಯದಂತೆ ‘ಧೋತಿ-ಕುರ್ತಾ’ ಧರಿಸಬೇಕೆಂದು ವಧುವಿನ ಸಂಬಂಧಿಕರು ಒತ್ತಾಯಿಸಿದ್ದರು. ಇದಕ್ಕೆ ವರ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಶನಿವಾರ ಮಂಗಬೈದ ಗ್ರಾಮದಲ್ಲಿ ಈ ಗಲಾಟೆ ನಡೆದಿದೆ. ಧಾರ್ ನಗರದ ನಿವಾಸಿಯಾಗಿರುವ ವರ ಸುಂದರ್‌ಲಾಲ್ ಮದುವೆಗೆ ಶೇರ್ವಾನಿ ಧರಿಸಿದ್ದರು. ಆದರೆ ವಧುವಿನ ಸಂಬಂಧಿಕರು ಧೋತಿ-ಕುರ್ತಾದಲ್ಲಿ ವಿವಾಹವನ್ನು ನಡೆಸಬೇಕೆಂದು ಒತ್ತಾಯಿಸಿದರು ಎಂದು ಧಮ್ನೋದ್ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್ ಯದುವಂಶಿ ಹೇಳಿದ್ದಾರೆ.
ಇದು ಎರಡು ಕಡೆಯ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ಎರಡೂ ಕಡೆಯ ಕುಟುಂಬಸ್ಥರು ಪೊಲೀಸರಿಗೆ ದೂರುಗಳನ್ನು ಸಲ್ಲಿಸಿದರು. ಅದರ ಆಧಾರದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (ಅಶ್ಲೀಲ ಕಾಯ್ದೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಧುವಿನ ಸಂಬಂಧಿಕರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ಕೆಲವು ಮಹಿಳೆಯರು ಆರೋಪಿಸಿದ್ದಾರೆ. ನಂತರ ಶನಿವಾರ, ವಧು ಮತ್ತು ವರನ ಕುಟುಂಬಗಳು ಧಾರ್ ನಗರಕ್ಕೆ ಆಗಮಿಸಿ ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿವಾದದ ನಡುವೆಯೂ ಈ ಮದುವೆ ಮತ್ತೆ ನಡೆದಿದೆ ಎಂಬುದೇ ಸಮಾಧಾನಕರ ಸಂಗತಿ.
ಇನ್ನಷ್ಟು ಕುತೂಹಲಕಾರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Mon, 9 May 22