Viral News: ಕರೆಂಟ್ ಹೋಗಿದ್ದರಿಂದ ಮಂಟಪದಲ್ಲಿ ಮದುಮಗಳೇ ಅದಲು-ಬದಲು; ಮದುವೆಯಾದ ಮೇಲೆ ಸತ್ಯ ಬಯಲು!

| Updated By: ಸುಷ್ಮಾ ಚಕ್ರೆ

Updated on: May 09, 2022 | 8:51 PM

Wedding Story: ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ ಕೊಟ್ಟಿದ್ದರಿಂದ ವಧುಗಳು ಅದಲುಬದಲಾಗಿದ್ದಾರೆ.

Viral News: ಕರೆಂಟ್ ಹೋಗಿದ್ದರಿಂದ ಮಂಟಪದಲ್ಲಿ ಮದುಮಗಳೇ ಅದಲು-ಬದಲು; ಮದುವೆಯಾದ ಮೇಲೆ ಸತ್ಯ ಬಯಲು!
ಮದುವೆ
Follow us on

ಮದುವೆ ಎಲ್ಲರ ಜೀವನದಲ್ಲೂ ಅತ್ಯಂತ ಮಹತ್ವದ ಘಟ್ಟ. ಆದರೆ, ಕರೆಂಟ್​ ಇಲ್ಲದ ಕಾರಣ ಇಲ್ಲಿಬ್ಬರು ಯುವತಿಯರಿಗೆ ಮಂಟಪದಲ್ಲಿ ಇನ್ಯಾರೋ ತಾಳಿ ಕಟ್ಟಿ ಮದುವೆಯಾಗಿದ್ದಾರೆ! ಅಕ್ಕ-ತಂಗಿಯರು ಒಂದೇ ಮಂಟಪದಲ್ಲಿ ಮದುವೆಯಾಗಬೇಕಿತ್ತು. ಇಬ್ಬರೂ ಮಕ್ಕಳ ಮದುವೆಯನ್ನು (Wedding) ಒಟ್ಟಿಗೇ ಮಾಡಬೇಕೆಂಬುದು ಅವರ ಹೆತ್ತವರ ಆಸೆಯಾಗಿತ್ತು. ಹೀಗಾಗಿ, ಒಟ್ಟಿಗೇ ಮದುವೆ ಫಿಕ್ಸ್​ ಮಾಡಿದ್ದರು. ಆದರೆ, ಕರೆಂಟ್ ಅವರಿಬ್ಬರ ಜೀವನದಲ್ಲಿ ಆಟವಾಡಿ ಬಿಟ್ಟಿತ್ತು.

ಭಾನುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ ಕೊಟ್ಟಿದ್ದರಿಂದ ವಧುಗಳು ಅದಲುಬದಲಾಗಿದ್ದಾರೆ. ಅಕ್ಕ-ತಂಗಿಯರಿಬ್ಬರೂ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರಿಂದ ಅವರ ಮನೆಯವರಿಗೂ ಈ ವಿಷಯ ಗಮನಕ್ಕೆ ಬಂದಿಲ್ಲ.

ವಧುಗಳು ಮುಖಕ್ಕೆ ಮುಸುಕು ಹಾಕಿಕೊಂಡಿದ್ದರಿಂದ ಮತ್ತು ವಿದ್ಯುತ್ ಇಲ್ಲದ ಕಾರಣ ವಧುಗಳು ಅದಲುಬದಲಾಗಿರುವ ವಿಷಯ ಯಾರಿಗೂ ಗೊತ್ತಾಗಿಲ್ಲ. ವಧುಗಳಿಗೆ ಕೂಡ ತಮ್ಮನ್ನು ವರಿಸುವವರ ಮುಖವನ್ನು ನೋಡಲು ಸಾಧ್ಯವಾಗಿಲ್ಲ. ಮದುವೆಯ ಶಾಸ್ತ್ರಗಳೆಲ್ಲ ನಡೆದ ನಂತರ ಪಂಡಿತರು ವಧು-ವರರಿಬ್ಬರಿಗೂ ಸಪ್ತಪದಿ ಸುತ್ತಲು ಹೇಳಿದರು. ನಂತರ ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮಕ್ಕೆ ವರರು ತಮ್ಮ ವಧುಗಳನ್ನು ಮನೆಗೆ ಕರೆದೊಯ್ದಾಗ ಬೇರೆ ವಧುವನ್ನು ಮದುವೆಯಾಗಿರುವ ವಿಷಯ ಗೊತ್ತಾಗಿದೆ. ಈ ಬಗ್ಗೆ ವರರ ಎರಡೂ ಕುಟುಂಬಗಳ ನಡುವೆ ಸ್ವಲ್ಪ ಸಮಯದ ವಾದ ವಿವಾದದ ನಂತರ ಪ್ರಕರಣ ಇತ್ಯರ್ಥವಾಗಿದೆ.

ಮರುದಿನ ಮತ್ತೊಮ್ಮೆ ಮದುವೆ ಸಮಾರಂಭವನ್ನು ಮಾಡಿ ತಮಗೆ ನಿಗದಿಯಾಗಿದ್ದ ಯುವತಿಯ ಜೊತೆಯೇ ಆ ವರರಿಬ್ಬರೂ ಮತ್ತೊಮ್ಮೆ ಮದುವೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಭಾರತದ ಅನೇಕ ನಗರಗಳು ವಿದ್ಯುತ್ ನಿಲುಗಡೆಗೆ ಸಾಕ್ಷಿಯಾಗುತ್ತಿವೆ. ಭಾರತದ ಹೆಚ್ಚಿನ ವಿದ್ಯುತ್ ಬಳಕೆ ಕಲ್ಲಿದ್ದಲು ಆಧಾರಿತವಾಗಿದೆ.

ಗರಿಷ್ಠ ವಿದ್ಯುತ್ ಬೇಡಿಕೆಯು ಏಪ್ರಿಲ್ ಕೊನೆಯ ವಾರದಲ್ಲಿ 201 ಗಿಗಾವ್ಯಾಟ್‌ಗಳಿಗಿಂತ ಹೆಚ್ಚಿನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು. ಮೇ-ಜೂನ್‌ನಲ್ಲಿ ಬೇಡಿಕೆ 220 ಗಿಗಾವ್ಯಾಟ್‌ಗೆ ತಲುಪುವ ನಿರೀಕ್ಷೆಯಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ