ತೆಲಂಗಾಣ: ಕರೀಂನಗರ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮವೊಂದು ನೆರವೇರಿದೆ. ಆದ್ರೆ ನಾಮಕರಣ ಕಾರ್ಯಕ್ರಮ ಸುದ್ದಿಯಾಗುವಷ್ಟು ವಿಶೇಷತೆ ಏನಿದೆ ಅಂತಾ ನೀವು ಅಂದುಕೊಂಡಿರಬಹುದು. ಹೌದು ಈ ಕಾರ್ಯಕ್ರಮದಲ್ಲಿ ವಿಶೇಷತೆಯಿದೆ. ಯಾಕೆಂದರೆ ಕುಟುಂಬವೊಂದು ತಮ್ಮ ಮನೆಯಲ್ಲಿ ಜನಿಸಿದ ಕರುವೊಂದರ ನಾಮಕರಣ ಕಾರ್ಯಕ್ರಮವನ್ನು ತಮ್ಮ ಮನೆಯ ಮಗುವಿನ ನಾಮಕರಣದಂತೆ ಅದ್ದೂರಿಯಾಗಿ ಮಾಡಿದ್ದಾರೆ.
ಕರೀಂನಗರದ ಗೌರಿಶೆಟ್ಟಿ ಮುನೀಂದರ್ ಮತ್ತು ಅನುರಾಧ ದಂಪತಿಗೆ ಹಸುಗಳೆಂದರೆ ಬಹಳ ಪ್ರೀತಿ. ಇತ್ತೀಚೆಗೆ ಅವರು ಸಾಕಿದ್ದ ಹಸು ಕರುವಿಗೆ ಜನ್ಮ ನೀಡಿದೆ. ಇದೀಗ ಕರು ಹುಟ್ಟಿದ 21 ದಿನಗಳ ನಂತರ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.
ನಾಮಕರಣ ಕಾರ್ಯಕ್ರಮದಲ್ಲಿ ಸುಮಾರು 500 ಜನರು ಭಾಗಿಯಾಗಿದ್ದು, ಕರುವನ್ನು ಸುಂದರವಾಗಿ ಅಲಂಕರಿಸಿದ ತೊಟ್ಟಿಲಲ್ಲಿ ಕೂರಿಸಿ ದೇವರ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಲಾಗಿದೆ. ಇದಲ್ಲದೇ ಅತಿಥಿಗಳಿಗೆ ಭರ್ಜರಿ ಔತಣ ಕೂಟವನ್ನು ಆಯೋಜಿಸಲಾಗಿತ್ತು.ಕರುವಿನ ನಾಮಕರಣ ಕಾರ್ಯಕ್ರಮವನ್ನು ಕಂಡು ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು
ಕರುವಿಗೆ ರಾಧಾರಾಣಿ ಎಂದು ನಾಮಕರಣ ಮಾಡಿದ್ದು,ಗೋ ಮಾತೆಯನ್ನು ಕೂಡ ಹೊಸ ಬಟ್ಟೆ ಹಾಗೂ ಅರಿಶಿನ ಕುಂಕುಮವಿಟ್ಟು ಅಲಂಕರಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ತುಳಸಿ ಗಿಡಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ