ಐಪಿಎಸ್ ಕನಸು ನನಸಾಗಿಸಿಕೊಂಡ 13 ವರ್ಷದ ಇಬ್ಬರು ವಿದ್ಯಾರ್ಥಿಗಳು
ತಾನು ಕಲಿತು ದೊಡ್ಡವನಾಗಿ ಐಎಎಸ್, ಐಪಿಎಸ್ (IAS, IPS) ಆಗಬೇಕು ಎಂದು ಹಲವರು ಕನಸು ಕಟ್ಟಿಕೊಂಡಿರುತ್ತಾರೆ. ಕೆಲವರು ತಮ್ಮ ಕನಸನ್ನು ನನಸಾಗಿಸದರೆ, ಇನ್ನು ಕೆಲವರಿಗೆ ಅಸಾಧ್ಯ. ಮತ್ತೂ ಕೆಲವರಿಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ಸಾಧ್ಯವಾಗುವುದಿಲ್ಲ. ಈ ಪೈಕಿ ಮೂರನೇ ವಿಷಯಕ್ಕೆ ಸೇರಿದ 13 ವರ್ಷದ ಇಬ್ಬರು ವಿದ್ಯಾರ್ಥಿಗಳು ತಾವು ಐಪಿಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದು, ಇವರ ಕನಸನ್ನು ಬೆಂಗಳೂರು ಪೊಲೀಸರು ನನಸಾಗಿಸಿದ್ದಾರೆ. ಕ್ಯಾನ್ಸರ್ (Cancer) ಕಾಯಿಲೆಗಳೊಂದಿಗೆ ಹೋರಾಡುತ್ತಿರುವ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಗುರುವಾರ ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಐಪಿಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಪೊಲೀಸರು ಅನುವುಮಾಡಿಕೊಟ್ಟಿದ್ದಾರೆ.
13 ವರ್ಷದ ಮಿಥಿಲೇಶ್ ಮತ್ತು ಮೊಹಮ್ಮದ್ ಸಲ್ಮಾನ್ ಖಾನ್ ಅವರು ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸಮವಸ್ತ್ರವನ್ನು ಧರಿಸಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿಗೆ ಕಾಲಿಟ್ಟರು. ಈ ವೇಳೆ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ನಂತರ ಅಲ್ಪ ಸಮಯವನ್ನು ಕಚೇರಿಯಲ್ಲಿ ಕಳೆದ ವಿದ್ಯಾರ್ಥಿಗಳು, ನಂತರ ಚಟುವಟಿಕೆಗಳು ಮತ್ತು ವ್ಯಾಯಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಡಿಸಿಪಿ ಅವ ದಿನನಿತ್ಯದ ಕೆಲಸದ ಭಾಗವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಠಾಣೆಯಲ್ಲಿ ಡಿಸಿಪಿಗಳಿಗೆ ಸಿಬ್ಬಂದಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಪ್ರಸ್ತುತಪಡಿಸಿದರು. ಇದೇ ವೇಳೆ ಇಬ್ಬರು ಡಿಸಿಪಿಗಳು ದೂರನ್ನು ಆಲಿಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ಈ ವೇಳೆ ಪೊಲೀಸ್ ಅಧಿಕಾರಿಯಾಗುವ ಕನಸಿನ ಮಾತನ್ನು ಹಂಚಿಕೊಂಡ ಸಲ್ಮಾನ್, ಸಂಕಷ್ಟದಲ್ಲಿರುವ ಎಷ್ಟೋ ಜನರಿಗೆ ಸಾಂತ್ವನ ನೀಡುವ ಉದಾತ್ತ ವೃತ್ತಿ ಇದಾಗಿದೆ ಎಂದರು. ಈ ವೇಳೆ ಮಿಥಿಲೇಶ್ ಅವರು ಟ್ರಾಫಿಕ್ ನಿರ್ವಹಣೆ ಮತ್ತು ರಸ್ತೆ ಶಿಸ್ತಿನ ಬಗ್ಗೆ ಇರುವ ಆಸಕ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.
ಬೆಂಗಳೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಾಲಕರ ಆಸೆಗಳನ್ನು ಈಡೇರಿಸುವ ಮೇಕ್-ಎ-ವಿಶ್ ಫೌಂಡೇಶನ್‌ನ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮವು ನಡೆಯಿತು. ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಐಪಿಎಸ್ ಅಧಿಕಾರಿ ಸಿಕೆ ಬಾಬಾ ಅವರು ಇಬ್ಬರು ವಿದ್ಯಾರ್ಥಿಗಳು ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಫೋಟೋ ಹಂಚಿಕೊಳ್ಳುವಾಗ ಸಿಕೆ ಬಾಬಾ ಅವರು, “ಕಠಿಣ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಧೈರ್ಯಶಾಲಿ ಮಕ್ಕಳು ಮತ್ತು ಅವರ ಆಸೆಯನ್ನು ಈಡೇರಿಸುವಲ್ಲಿ ನಾವು ಸ್ವಲ್ಪ ಪಾತ್ರವಹಿಸಿದ್ದೇವೆ. ಅವರಿಗೆ ಅಪರಿಮಿತ ಸಂತೋಷ ಮತ್ತು ನಮಗೆ ತೃಪ್ತಿ” ಎಂದು ಶೀರ್ಷಕೆ ಬರೆದಿದ್ದಾರೆ.
ಉಪಕ್ರಮದ ಭಾಗವಾಗಿ, ಐಪಿಎಸ್ ಅಧಿಕಾರಿಗಳಾಗಲು ಬಯಸುವ ಹುಡುಗರು ಕೋರಮಂಗಲದ ಕಚೇರಿಯಲ್ಲಿ ಆಗ್ನೇಯ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಾಲಕರು ಪೊಲೀಸ್ ಸಿಬ್ಬಂದಿಯೊಂದಿಗೆ ಊಟವನ್ನು ಹಂಚಿಕೊಂಡರು ಮತ್ತು ಅಧಿಕಾರಿಗಳು ಸ್ಮರಣಿಕೆಯನ್ನು ನೀಡಿದರು” ಎಂದು ಶಿಕೆ ಬಾಬಾ ಅವರು ಹೇಳಿದ್ದಾರೆ.
ಮಿಥಿಲೇಶ್ ಅವರು ಬೊಮ್ಮನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದು, ತೀವ್ರವಾದ ಲಿಂಫೋಸೈಟಿಕ್ ಲ್ಯುಕೇಮಿಯಾ, ಬಿಳಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ರಕ್ತ ಮತ್ತು ಮೂಳೆ ಮಜ್ಜೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕೇರಳದ ಕೊಟ್ಟಾಯಂ ಮೂಲದ ಸಲ್ಮಾನ್, ತಲಸ್ಸೇಮಿಯಾ, ಅನುವಂಶಿಕ ರಕ್ತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.