Viral Video : ಇಂದು ಏನೇ ಸಾಧನೆ ಮಾಡುವಲ್ಲಿ ಶಿಕ್ಷಣದ ಪಾತ್ರ ಅತೀ ಮಹತ್ವದ್ದು. ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಯಾರೂ ಏನೂ ಸಾಧಿಸಬಹುದು. ಸಾಕಷ್ಟು ಉತ್ತಮ ಅವಕಾಶಗಳನ್ನು ಪಡೆಯಬಹುದು. ಆದರೆ ಸಮಾನ ಶಿಕ್ಷಣ ಎನ್ನುವುದು ಇನ್ನೂ ಕನಸಾಗಿಯೇ ಇದೆ. ನಮ್ಮ ಭಾರತದಂಥ ದೇಶಗಳಲ್ಲಿ ಇದೆಲ್ಲ ಯಾವಾಗ ನನಸಾಗುವುದೋ? ಆದರೂ ಎಲ್ಲ ಸಮಸ್ಯೆಗಳ ಮಧ್ಯೆ ಕೆಲವರು ಕಷ್ಟಪಟ್ಟು ಶಿಕ್ಷಣವನ್ನು ಪೂರೈಸಲು ಮನಸ್ಸು ಮಾಡುತ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಶಾಲಾಬಾಲಕಿಯೊಬ್ಬಳು ಫುಟ್ಪಾತ್ ಮೇಲೆ ಕುಳಿತು, ಬೀದಿದೀಪದ ಕೆಳಗೆ ಅಭ್ಯಾಸ ಮಾಡುತ್ತಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವಳ ಶ್ರದ್ಧೆಯನ್ನು ಪ್ರಶಂಸಿಸುತ್ತಿದ್ದಾರೆ.
Stutes Zone 987 ಎಂಬ ಇನ್‌ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋ ಅನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಚಲಿಸುತ್ತಿರುವಾಗ ಈ ವಿಡಿಯೋ ಚಿತ್ರೀಕರಿಸಿದಂತಿದೆ. ಶಾಲೆಯ ಸಮವಸ್ತ್ರ ಧರಿಸಿದ ಈ ಹುಡುಗಿ ಫುಟ್ಪಾತ್ ಮೇಲೆ ಕುಳಿತು ನೋಟ್ಬುಕ್ಕಿನಲ್ಲಿ ಹೋಮ್ವರ್ಕ್ ಮಾಡುತ್ತಿದ್ದಾಳೆ. ಅವಳ ಎದುರು ನಿರಂತರವಾಗಿ ವಾಹನಗಳು ಓಡಾಡುತ್ತಿದ್ದರೂ ಈಕೆ ಮಾತ್ರ ಅಭ್ಯಾಸದಲ್ಲಿ ತಲ್ಲೀನಳಾಗಿದ್ದಾಳೆ.
‘ಇಂದಿನ ಅತ್ಯುತ್ತಮ ವಿಡಿಯೋ ಇದು. ಯಾರ ಬಳಿ ಏನಿಲ್ಲವೋ ಅದನ್ನು ಪಡೆದುಕೊಳ್ಳುವತ್ತ ಅವರು ಶ್ರಮ ಹಾಕಿಯೇ ಹಾಕುತ್ತಾರೆ’ ಎಂದು ನೆಟ್ಟಿಗರೊಬ್ಬರು ಕೊಂಡಾಡಿದ್ದಾರೆ. ಹೀಗೆ ನೀನು ಕಷ್ಟಪಟ್ಟು ಓದಿ ನಾಳೆಯೊಂದು ದಿನ ನಮ್ಮ ದೇಶವನ್ನು ಬೆಳಗುವಂತೆ ಮಾಡುತ್ತೀ ಮಗಳೇ, ನಿನ್ನ ಬಗ್ಗೆ ಹೆಮ್ಮೆ ಇದೆ ನಮಗೆಲ್ಲ ಎಂದಿದ್ದಾರೆ ಇನ್ನೂ ಒಬ್ಬರು.
ತಮ್ಮ ಮಕ್ಕಳು ಓದಲಿ ಎಂದು ಅನೇಕ ಸೌಲಭ್ಯಗಳನ್ನು ಪೋಷಕರು ಒದಗಿಸುತ್ತಾರೆ. ಆದರೆ ಇಲ್ಲಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:24 pm, Thu, 27 October 22