ಚಾರ್ಧಾಮ್ ಯಾತ್ರೆಗೆ ತನ್ನ ಮುದ್ದಿನ ನಾಯಿಯನ್ನು ಕರೆದೊಯ್ದ ಭಕ್ತರೊಬ್ಬರು ಇದೀಗ ಫಜೀತಿಗೆ ಸಿಲುಕಿದ್ದಾರೆ. ಭಾರತೀಯ ಮೂಲದ ಸೋಶಿಯಲ್ ಮೀಡಿಯಾ (Social Media) ಬಳಕೆದಾರರೊಬ್ಬರು ತಮ್ಮ ಪ್ರೀತಿಯ ನವಾಬ್ ಎಂಬ ಮುದ್ದಿನ ನಾಯಿಯನ್ನು ಕೇದಾರನಾಥ ದೇವಸ್ಥಾನಕ್ಕೆ (Kedarnath Temple) ಕರೆದುಕೊಂಡು ಹೋಗಿದ್ದರು. ಕೇದಾರನಾಥನ ಸನ್ನಿಧಿಗೆ ಹಸ್ಕಿ ನಾಯಿಯನ್ನು ಹೊತ್ತೊಯ್ದಿದ್ದ ರೋಹನ್ ತ್ಯಾಗಿ ತನ್ನ ಮುದ್ದಿನ ನಾಯಿಗೆ ತಿಲಕವನ್ನು ಇಟ್ಟಿದ್ದರು. ಕೇದಾರನಾಥ ದೇವಸ್ಥಾನದ ಎದುರು ನಾಯಿಯನ್ನು ಕೂರಿಸಿ ಫೋಟೋವನ್ನೂ ತೆಗೆದಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ನಾಯಿಯನ್ನು ಕೇದಾರನಾಥಕ್ಕೆ ಕರೆದುಕೊಂಡು ಹೋಗಿದ್ದ ರೋಹನ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ನವಾಬ್ ತ್ಯಾಗಿ ಎಂಬ ನಾಯಿ ಮತ್ತು ಅದರ ಮಾಲೀಕ ರೋಹನ್ ತ್ಯಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇತರರು ಈ ಕ್ರಮವು ಪ್ರಪಂಚದಾದ್ಯಂತದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಟೀಕಿಸಿದ್ದಾರೆ. ನಾಲ್ಕೂವರೆ ವರ್ಷದ ಹಸ್ಕಿ ನಾಯಿಯಾದ ನವಾಬ್ ತ್ಯಾಗಿ ಕೆಲವು ದಿನಗಳ ಹಿಂದೆ ನೋಯ್ಡಾ ಮೂಲದ ತನ್ನ ಮಾಲೀಕರೊಂದಿಗೆ ‘ಚಾರ್ ಧಾಮ್ ಯಾತ್ರೆ’ಯಲ್ಲಿ ಭಾಗವಹಿಸಿತ್ತು. ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನವಾಬ್ ತ್ಯಾಗಿ ವಿಡಿಯೋಗಳಿಗೆ ಭಾರೀ ಬೇಡಿಕೆ ಬಂದಿದೆ. ಈ ಇನ್ಸ್ಟಾಗ್ರಾಂ ಪೇಜ್ 74,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
ಇದನ್ನೂ ಓದಿ: ಕೇದಾರನಾಥದ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್ಡಿ ದೇವೇಗೌಡರಿಂದ ಪತ್ರ
ನವಾಬ್ ಎಂಬ ಈ ನಾಯಿ ಕೇದಾರನಾಥ ದೇವಸ್ಥಾನದಲ್ಲಿ ಶಿವನ ಗೂಳಿ, ನಂದಿಯಿಂದ ಆಶೀರ್ವಾದ ಪಡೆಯುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನವಾಬ್ ತ್ಯಾಗಿ ತನ್ನ ಕಾಲುಗಳಿಂದ ವಿಗ್ರಹದ ಪಾದಗಳನ್ನು ಸ್ಪರ್ಶಿಸುವುದನ್ನು ಕಾಣಬಹುದು. ಇದನ್ನು ನೋಡಿದ ಬದರಿನಾಥ್- ಕೇದಾರನಾಥ ದೇವಾಲಯ ಸಮಿತಿಯು (BKTC) ನವಾಬ್ ಎಂಬ ಈ ನಾಯಿಯ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಸಮಿತಿಯ ಪ್ರಕಾರ, ಭಕ್ತ ತನ್ನ ಸಾಕುಪ್ರಾಣಿಯನ್ನು ದೇಗುಲಕ್ಕೆ ಕೊಂಡೊಯ್ಯುವುದು ಖಂಡನೀಯವಾಗಿದೆ.
ನೋಯ್ಡಾದ ವ್ಲಾಗರ್ ರಾಹುಲ್ ತ್ಯಾಗಿ ಅವರು ತಮ್ಮ ಸಾಕುನಾಯಿಯನ್ನು ಕೇದಾರನಾಥ ದೇಗುಲಕ್ಕೆ ಕರೆದೊಯ್ದು ಅದಕ್ಕೆ ಸಿಂಧೂರ ತಿಲಕವನ್ನು ಹಾಕಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿ ಫೆಡರಲ್ ವರದಿಯ ಪ್ರಕಾರ, ತ್ಯಾಗಿ ಅವರು ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ತಮ್ಮ ನಾಲ್ಕೂವರೆ ವರ್ಷದ ನವಾಬ್ ಎಂಬ ಮುದ್ದಿನ ಹಸ್ಕಿಯನ್ನು ಕರೆದೊಯ್ದಿದ್ದರು. ದೇವಸ್ಥಾನದ ಹೊರಗಿರುವ ನಂದಿಯ ವಿಗ್ರಹವನ್ನು ಅದರ ಕಾಲಿನಿಂದ ಸ್ಪರ್ಶಿಸುವ ಮೂಲಕ ನವಾಬ್ ಆಶೀರ್ವಾದ ಪಡೆಯುವ ವಿಡಿಯೋ ವೈರಲ್ ಆಗಿದೆ. ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ, ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ಇಂತಹ ಚಟುವಟಿಕೆಗಳಿಂದ ಅವರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‌ಗಳು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ಅನೇಕರು ಟೀಕಿಸಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ