Viral Video: ಮೇಲ್ಸೇತುವೆಯಲ್ಲಿ ರಾಕೆಟ್​ನಂತೆ ನುಗ್ಗಿದ ಕಾರು; ಬಂದಷ್ಟೇ ವೇಗದಲ್ಲಿ ತಡೆಗೋಡೆಗೆ ಗುದ್ದಿ ಪಲ್ಟಿ

| Updated By: Digi Tech Desk

Updated on: Jun 15, 2021 | 2:18 PM

Car Accident Video: ಮೇಲ್ಸೇತುವೆಯಲ್ಲಿ ತನ್ನ ಮುಂದಿದ್ದ ಕಾರನ್ನು ವೇಗವಾಗಿ ಹಿಂದಿಕ್ಕಲು ಹೋದಾಗ ಅವಘಡ ಸಂಭವಿಸಿದೆ. ಈ ದೃಶ್ಯಾವಳಿಗಳು ಮತ್ತೊಂದು ಕಾರಿನ ಡ್ಯಾಶ್​ಬೋರ್ಡ್​ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Viral Video: ಮೇಲ್ಸೇತುವೆಯಲ್ಲಿ ರಾಕೆಟ್​ನಂತೆ ನುಗ್ಗಿದ ಕಾರು; ಬಂದಷ್ಟೇ ವೇಗದಲ್ಲಿ ತಡೆಗೋಡೆಗೆ ಗುದ್ದಿ ಪಲ್ಟಿ
ಅಪಘಾತದ ದೃಶ್ಯ
Follow us on

ಕನ್ನಡದ ಪ್ರತಿಭಾನ್ವಿತ ನಟ, ಸ್ನೇಹ ಜೀವಿ, ಅಂತಃಕರುಣಿ ಸಂಚಾರಿ ವಿಜಯ್​ ಅಪಘಾತದಿಂದ ಕೊನೆಯುಸಿರೆಳೆದ ಸಂಗತಿಯನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅಪಘಾತ ಘಟಿಸಿದ ನಂತರ ಛೇ ಹೀಗಾಗಬಾರದಿತ್ತು ಎಂದು ಎಷ್ಟೇ ಮರುಗಿದರೂ, ಹೀಗೆ ಮಾಡಿದ್ದರೆ ಅಪಘಾತ ಘಟಿಸುತ್ತಿರಲಿಲ್ಲ ಎಂದು ಎಷ್ಟೇ ಲೆಕ್ಕಾಚಾರ ಹಾಕಿದರೂ ಅದೊಂದು ವ್ಯರ್ಥ ತೊಳಲಾಟ, ಸಂಕಟವಾಗಿ ಮಾತ್ರ ಉಳಿಯುತ್ತದೆಯೇ ಹೊರತು ಹೋದ ಜೀವವನ್ನು ವಾಪಾಸು ತಂದುಕೊಡಲಾರದು. ಹೀಗಾಗಿಯೇ ವಾಹನ ಓಡಿಸುವವರು ಮೈಯೆಲ್ಲಾ ಕಣ್ಣಾಗಿರಬೇಕು, ತುಸು ತಡವಾದರೂ ಪರವಾಗಿಲ್ಲ ನಿಧಾನವಾಗಿ ಚಲಿಸಬೇಕು, ವೇಗಕ್ಕಿಂತ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳುವುದು. ಸಂಚಾರಿ ವಿಜಯ್​ ಅಪಘಾತದ ಸಂಗತಿ ನಮ್ಮನ್ನು ಕಾಡುತ್ತಿರುವ ಹೊತ್ತಿನಲ್ಲೇ ತಮಿಳುನಾಡಿನಲ್ಲಾದ ಕಾರು ಅಪಘಾತವೊಂದರ ವಿಡಿಯೋ ವೈರಲ್ ಆಗುತ್ತಿದೆ.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಂಡಂ ಬಳಿಯ ಮೇಲ್ಸೇತುವೆಯಲ್ಲಿ ನಡೆದ ಈ ಅಪಘಾತದಲ್ಲಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ರಸ್ತೆಗೆ ಉರಳಿದೆ. ಮಹೀಂದ್ರಾ ಕ್ಸೈಲೋ ವಾಹನ ಅಪಘಾತಕ್ಕೆ ಈಡಾಗಿರುವುದಾಗಿದ್ದು, ಮೇಲ್ಸೇತುವೆಯಲ್ಲಿ ತನ್ನ ಮುಂದಿದ್ದ ಕಾರನ್ನು ವೇಗವಾಗಿ ಹಿಂದಿಕ್ಕಲು ಹೋದಾಗ ಅವಘಡ ಸಂಭವಿಸಿದೆ. ಈ ದೃಶ್ಯಾವಳಿಗಳು ಮತ್ತೊಂದು ಕಾರಿನ ಡ್ಯಾಶ್​ಬೋರ್ಡ್​ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾರ್ತಾಂಡಂ ಮೇಲ್ಸೇತುವೆ ಮೇಲೆ ವೇಗವಾಗಿ ಕಾರು ಓಡಿಸಿಕೊಂಡು ಬಂದ ಮಹೀಂದ್ರಾ ಕ್ಸೈಲೋ ಚಾಲಕ ತನ್ನ ಮುಂದಿದ್ದ ಮತ್ತೊಂದು ಕಾರನ್ನು ಅಷ್ಟೇ ವೇಗವಾಗಿ ಹಿಂದಿಕ್ಕಿದ್ದಾನೆ. ಆದರೆ, ಹೀಗೆ ಹಿಂದಿಕ್ಕುವ ಸಂದರ್ಭದಲ್ಲಿ ಎದುರಿನಿಂದ ಮತ್ತೊಂದು ವಾಹನ ಬರುತ್ತಿರುವುದು ಚಾಲಕನ ಕಣ್ಣಿಗೆ ಬಿದ್ದಿದೆ. ಇನ್ನೇನು ಆ ವಾಹನಕ್ಕೆ ಗುದ್ದಿಯೇ ಬಿಡಬೇಕು ಎನ್ನುವಷ್ಟರಲ್ಲಿ ಅದನ್ನು ಹೇಗೋ ತಪ್ಪಿಸಿದನಾದರೂ ಕಾರು ನಿಯಂತ್ರಣ ತಪ್ಪಿದೆ. ವೇಗವಾಗಿ ಬಂದು ನಿಯಂತ್ರಣ ತಪ್ಪಿದ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ತಡೆಗೋಡೆಗೂ ಹೋಗಿ ಗುದ್ದಿದೆ.

ಅದೃಷ್ಟವಶಾತ್, ತಡೆಗೋಡೆ ಗಟ್ಟಿಯಾಗಿದ್ದ ಕಾರಣ ಕಾರು ಅದಕ್ಕೆ ಗುದ್ದಿದರೂ ಮೇಲ್ಸೇತುವೆಯಿಂದ ಕೆಳಕ್ಕೆ ಉರುಳುವುದು ತಪ್ಪಿದೆ. ಆದರೆ, ಅಪಘಾತದ ರಭಸಕ್ಕೆ ಮಹೀಂದ್ರಾ ಕ್ಸೈಲೋ ಕಾರಿನಲ್ಲಿದ್ದವರಿಗೆ ಪೆಟ್ಟಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಧಾವಿಸಿದ್ದಾರೆಂದು ತಿಳಿದುಬಂದಿದೆ. ವಿಡಿಯೋವನ್ನು ನೋಡುವಾಗ ಆ ಕೊನೇಕ್ಷಣದಲ್ಲಿ ಕಾರೊಂದು ಬರಬಹುದು ಎನ್ನುವ ಊಹೆಯೂ ನೋಡುಗರ ತಲೆಯಲ್ಲಿ ಮೂಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ವೇಗವಾಗಿ ಕಾರು ನುಗ್ಗಿಸುವ ಚಾಲಕ ಒಂದುಕ್ಷಣ ಮೈ ನಡುಗಿಸುವಂತೆ ಮಾಡುತ್ತಾನೆ. ಒಂದುವೇಳೆ ಕೊಂಚ ಯಡವಟ್ಟಾಗಿದ್ದರೂ ಈತ ಮಾಡಿದ ತಪ್ಪಿಗೆ ಎದುರಿಗಿದ್ದ ಕಾರಿನವರೂ ಜೀವ ತೆರುವಂತಾಗುತ್ತಿತ್ತು.

ಇದನ್ನೂ ಓದಿ:
ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು 

Viral Video: ಅವಸರವೇ ಅಪಘಾತಕ್ಕೆ ಕಾರಣ: ಸಮಯಕ್ಕೆ ಸರಿಯಾಗಿ ಎಚ್ಚರಿಸಿದ ಬೇಸ್​ ಜಂಪರ್​ ಸ್ನೇಹಿತನಿಗೆ ಕೊಡಬೇಕಿದೆ ಉಡುಗೊರೆ

Published On - 10:32 am, Tue, 15 June 21