ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು

ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಂದಹಾಗೆ, ಸ್ಯಾಂಡಲ್​​ವುಡ್​ನಲ್ಲಿ ಈ ಮೊದಲು ಕೂಡ ಸಾಕಷ್ಟು ಕಲಾವಿದರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು
ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು
Rajesh Duggumane

|

Jun 14, 2021 | 9:26 PM

ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಂದಹಾಗೆ, ಸ್ಯಾಂಡಲ್​ವುಡ್​ನಲ್ಲಿ ಈ ಮೊದಲು ಕೂಡ ಸಾಕಷ್ಟು ಕಲಾವಿದರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಸೌಂದರ್ಯಾ: ಅದು 2004ರ ಏಪ್ರಿಲ್ 17. ನಟಿ ಸೌಂದರ್ಯಾ ಬೆಂಗಳೂರಿನಿಂದ ಕರೀಮ್ ನಗರಕ್ಕೆ ತೆರಳಿ, ಬಿಜೆಪಿ ಪರ ಪ್ರಚಾರ ಮಾಡುವವರಿದ್ದರು. ಅಗ್ನಿ ಏರೋಸ್ಪೋರ್ಟ್ಸ್ ಒಡೆತನದ ನಾಲ್ಕು ಆಸನಗಳ ಮಿನಿ ವಿಮಾನ ಸೆಸ್ಸಾನಾ 180ಯನ್ನು ಬೆಳಗ್ಗೆ 11:05ಕ್ಕೆ ಏರಿದ್ದರು. ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಇದ್ದ ಕಿರುವಿಮಾನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪತನವಾಗಿತ್ತು. ಈ ದುರಂತದಲ್ಲಿ ಅವರು ಮೃತಪಟ್ಟಿದ್ದರು. ಸೌಂದರ್ಯಾ ಕನ್ನಡ ಹಾಗೂ ತೆಲುಗಿನಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದರು.

ಸುನೀಲ್: ಭೀಕರ ರಸ್ತೆ ಅಪಘಾತದಲ್ಲಿ 1994ರ ಜು.24ರಂದು ಸುನೀಲ್ ಮೃತಪಟ್ಟರು. ಸಾಯುವುದಕ್ಕೂ ಮೊದಲು ನಿರಂತರವಾಗಿ ಅವರು ಜರ್ನಿ ಮಾಡುತ್ತಿದ್ದರು. ಇವರ ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್ ಬಂದು ಸುನೀಲ್ ಅವರನ್ನು ಕರೆದುಕೊಂಡು ಬಂದಿದ್ದರು. ಬೆಂಗಳೂರಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಅವರು ಹೊರಟರು. ಡ್ರೈವರ್​ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ. ಪರಿಣಾಮ ಕಾರು ಅಪಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.

ಶಂಕರ್​ ನಾಗ್​: ಅತಿ ಕಡಿಮೆ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ ಖ್ಯಾತಿ ಶಂಕರ್ ​ನಾಗ್ ಅವರಿಗಿದೆ. ಆದರೆ, ದೇವರನ್ನು ಬಹುಬೇಗ ಕರೆದುಕೊಂಡು ಬಿಟ್ಟ. ‘ಜೋಕುಮಾರಸ್ವಾಮಿ’ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಈ ನಾಟಕವನ್ನು ಸಿನಿಮಾ ಮಾಡಬೇಕು ಎನ್ನುವ ಕನಸು ಶಂಕರ್ ​ನಾಗ್ ಅವರದ್ದಾಗಿತ್ತು. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್​ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್‌ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಸಂಚಾರಿ ವಿಜಯ್: ಶನಿವಾರ (ಜೂನ್ 12) ರಾತ್ರಿ ಸಂಚಾರಿ ವಿಜಯ್ ಬೆಂಗಳೂರಿನ ಗೆಳೆಯನ ಜತೆ ಬೈಕ್​ನಲ್ಲಿ ಹೋಗುವಾಗ ಅಪಘಾತ ಸಂಭವಿಸಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಿದುಳಿನ ಶಸ್ತ್ರಚಿಕಿತ್ಸೆ ಮಾಡಿ ಅನೇಕ ಗಂಟೆಗಳು ಕಳೆದರೂ ಪ್ರಜ್ಞೆ ಬಂದಿಲ್ಲ. ಬ್ರೇನ್ ಡೆಡ್ ಆಗಿ ಅವರು ಮೃತಪಟ್ಟರು. ಅವರ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ದೊರಕಿವೆ.

ಇದನ್ನೂ ಓದಿ:

ಸಂಚಾರಿ ವಿಜಯ್​ ಮಾಡಿದ ಆ ಒಂದು ತಪ್ಪು ನಿರ್ಧಾರ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯ್ತು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada