Dance : 1965ರಲ್ಲಿ ಬಿಡುಗಡೆಯಾದ ಗೈಡ್ ಸಿನೆಮಾದ ಹಾಡು ಇದು, ಪಿಯಾ ತೋಸೆ ನೈನಾ ಲಾಗೀರೇ. ಲತಾ ಮಂಗೇಶ್ಕರ್ ಹಾಡಿದ ಈ ಹಾಡು ಇಂದಿಗೂ ಹಾಡುವಂತೆ, ನರ್ತಿಸುವಂತೆ ಹುರಿದುಂಬಿಸುತ್ತಿದೆ ಎಂದರೆ ಯೋಚಿಸಿ. ಗೀತಸಾಹಿತ್ಯ, ಸ್ವರಸಂಯೋಜನೆ ಎಲ್ಲವೂ ಎಷ್ಟೊಂದು ಅರ್ಥಪೂರ್ಣ ಮತ್ತು ಮಾಧುರ್ಯಪೂರ್ಣವಾಗಿತ್ತು ಎಂದು. ಇಷ್ಟೆಲ್ಲಾ ಅಬ್ಬರದ ಸಂಗೀತದ ಮಧ್ಯೆಯೂ ತಂಗಾಳಿಯಂತೆ ಬೀಸುವ ಈ ಹಳೆಯ ಹಾಡುಗಳು ಮತ್ತು ಗಾಯಕರು ಎಂದಿಗೂ ಅಮರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
ನೃತ್ಯಸಂಯೋಜಕಿ ಮಾಧವಿ ಬನ್ಸಾಲ್ ಈ ವಿಡಿಯೋದಲ್ಲಿ ಬಹಳ ಆಕರ್ಷಕವಾಗಿ ನರ್ತಿಸಿದ್ದಾರೆ. ಗಾಯಕಿ ಜೋನಿತಾ ಗಾಂಧಿಯವರು ಹಾಡಿರುವ ಈ ಹಾಡು ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತಿದೆ. ಸೆಮಿ ಕ್ಲಾಸಿಕಲ್ ಸ್ಟೈಲ್ನಲ್ಲಿ, ಮಂದ ಬೆಳಕಿನಲ್ಲಿ ಮಾಧವಿ ಹಾಕಿರುವ ಹೆಜ್ಜೆಗಳು ನೋಡಿದ ಯಾರ ಮನಸ್ಸನ್ನೂ ಮುದಗೊಳಿಸುವಂತಿವೆ. ಬಹಳ ದಿನಗಳಿಂದ ಈ ಹಾಡು ನನ್ನ ಮನಸ್ಸಿನಲ್ಲಿತ್ತು ಇದೀಗ ಸಾಧ್ಯವಾಗಿದೆ ಎಂದು ಮಾಧವಿ ಹೇಳಿದ್ದಾರೆ.
ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?
ಈ ವಿಡಿಯೋ ಅನ್ನು ಮೇ 8 ರಂದು ಮಾಧವಿ ಪೋಸ್ಟ್ ಮಾಡಿದ್ದಾರೆ. ಈತನಕ 8 ಮಿಲಿಯನ್ಗಿಂತಲೂ ಹೆಚ್ಚು ಜನ ಇದನ್ನು ನೋಡಿದ್ದಾರೆ. ಸಾವಿರಾರು ಪ್ರತಿಕ್ರಿಯೆಗಳು ಇದಕ್ಕೆ ದಕ್ಕಿವೆ. 4 ಮುಕ್ಕಾಲು ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದಾರೆ. ನಾನಿದನ್ನು 50 ಸಲವಾದರೂ ನೋಡಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಅದ್ಭುತವಾಗಿ ನೃತ್ಯಸಂಯೋಜನೆ ಮಾಡಲಾಗಿದೆ. ಈ ಬ್ಯಾಕ್ಡ್ರಾಪ್ನಲ್ಲಿ ಮತ್ತಷ್ಟು ಹಾಡುಗಳಿಗೆ ಹೆಜ್ಜೆ ಹಾಕಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?
ನಿಮ್ಮ ಕಿವಿಯೋಲೆಗಳು ಕೇವಲ ಆಭರಣವಲ್ಲ. ನಿಮ್ಮ ಶೈಲಿಯ ಸೂಕ್ಷ್ಮ ಪ್ರತಿಬಿಂಬ. ಒಂದೊಂದು ಪಲಕು, ಝಲಕು ಅವುಗಳ ಮೂಲಕ ಎಷ್ಟು ಛಂದ ವ್ಯಕ್ತವಾಗಿದೆ ನೋಡಿ ಎಂದು ಇನ್ನೊಬ್ಬರು ಹೇಳಿದ್ದಾರೆ. ವಾಹ್ ಮತ್ತಷ್ಟು ಇಂಥ ರೀಲ್ಸ್ ಮಾಡಿ. ನಾನು ಏಳು ವರ್ಷಗಳಾದವು ಡ್ಯಾನ್ಸ್ ಮಾಡುವುದನ್ನು ಬಿಟ್ಟು. ನಿಮ್ಮ ಡ್ಯಾನ್ಸ್ ನೋಡಿದ ಮೇಲೆ ನನಗೂ ಮಾಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್
ಇಲ್ಲಿರುವ ಉದ್ದುದ್ದ ಪ್ರತಿಕ್ರಿಯೆಗಳನ್ನು ಓದಿದರೆ ಸಾಕು. ಈ ನೃತ್ಯ ಅದೆಷ್ಟು ಜನರನ್ನು ಹೇಗೆಲ್ಲ ಪ್ರಭಾವಿಸಿದೆ ಎಂದು ಅರ್ಥವಾಗುತ್ತದೆ. ಹೀಗೆ ಒಬ್ಬರಿಂದ ಇನ್ನೊಬ್ಬರು ಉತ್ತೇಜನಗೊಳ್ಳುತ್ತಾರೆ ಎಂದರೆ ಇನ್ನೇನು ಮತ್ತೆ? ಅದಕ್ಕೇ ಕಲೆ ಒಳ್ಳೆಯದು.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:26 am, Thu, 18 May 23