Viral Video: ಉಕ್ರೇನ್ ಮೇಲೆ ರಷ್ಯಾ ಶೆಲ್ ದಾಳಿ; ಕೃಷಿ ಜಮೀನಿಗೆ ಹತ್ತಿಕೊಂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಉಕ್ರೇನ್ ರೈತರು
ರಷ್ಯಾದ ಭೀಕರ ದಾಳಿಗೆ ಉಕ್ರೇನ್ ಈಗಾಗಲೇ ತತ್ತರಿಸಿ ಹೋಗಿದ್ದು, ಇದೀಗ ರಷ್ಯಾದ ಭಾರೀ ಶೆಲ್ ದಾಳಿಯಿಂದ ಉಕ್ರೇನ್ ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಬೆಳೆಗಳನ್ನು ಉಳಿಸಲು ರೈತರು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ರಷ್ಯಾದ ಭೀಕರ ದಾಳಿಗೆ ಉಕ್ರೇನ್ ಈಗಾಗಲೇ ತತ್ತರಿಸಿ ಹೋಗಿದ್ದು, ಇದೀಗ ರಷ್ಯಾದ ಭಾರೀ ಶೆಲ್ ದಾಳಿಯಿಂದ ಉಕ್ರೇನ್ ರೈತರು ತಮ್ಮ ಬೆಳೆಗಳನ್ನು ರಕ್ಷಿಸುವ ವಿಡಿಯೋ ವೈರಲ್ (Video Viral) ಆಗುತ್ತಿದೆ. ಫೆಬ್ರವರಿಯಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಆರಂಭಿಸಿದ್ದು, ರೈತರು ತಮ್ಮ ಕುಟುಂಬ ಮತ್ತು ದೇಶವನ್ನು ಪೋಷಿಸಲು ಬೆಳೆಸಿದ ಕೃಷಿಯನ್ನು ಕೂಡ ನಾಶಪಡಿಸುತ್ತಿದೆ. ಮೈಕೋಲೈವ್‌ನಲ್ಲಿ ರಷ್ಯಾ ಶೆಲ್ ದಾಳಿ ನಡೆಸಿದ್ದು, ಬೆಳೆದ ಬೆಳೆಯನ್ನು ರಕ್ಷಿಸಲು ರೈತರು ಹರಸಾಹಸ ಪಟ್ಟಿದ್ದಾರೆ.
ರಷ್ಯಾದ ಶೆಲ್ ದಾಳಿ ಮತ್ತು ಕ್ಷಿಪಣಿಗಳು ಹಲವಾರು ಕೃಷಿಭೂಮಿಗಳಿಗೆ ಅಪ್ಪಳಿಸಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ರೈತರು ತಮ್ಮ ಕೊಯ್ಲುಗಳನ್ನು ರಕ್ಷಿಸಲು ತುರ್ತು ಪ್ರಯತ್ನಗಳನ್ನು ಮಾಡಬೇಕಾಯಿತು. ಶೆಲ್ ದಾಳಿಯಿಂದ ಉಂಟಾದ ಬೆಂಕಿಯನ್ನು ಹತ್ತಿಕ್ಕಲು ರೈತನೊಬ್ಬ ಟ್ರ್ಯಾಕ್ಟರ್‌ನಲ್ಲಿ ಕುಳಿತು ನೀರನ್ನು ಸಿಂಪಡಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ ಮತ್ತಿಬ್ಬರು ವ್ಯಕ್ತಿಗಳು ಕೈಯಲ್ಲಿ ಸೊಪ್ಪನ್ನು ಹಿಡಿದುಕೊಂಡು ಬೆಂಕಿಯ ಕಿಡಿಯನ್ನು ನಂದಿಸುತ್ತಿರುವುದನ್ನು ಕಾಣಬಹುದು.
ಮಾಜಿ ಉಕ್ರೇನಿಯನ್ ರಾಜತಾಂತ್ರಿಕ ಒಲೆಕ್ಸಾಂಡರ್ ಶೇರ್ಬಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, “ಮೈಕೋಲೈವ್‌ನಲ್ಲಿ ದೈನಂದಿನ ಶೆಲ್ ದಾಳಿಯ ನಂತರ ಉಕ್ರೇನಿಯನ್ ರೈತರು ಸುಗ್ಗಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಶೀರ್ಷಿಕೆ ಬರೆದಿದ್ದಾರೆ. 58 ಸೆಕೆಂಡುಗಳ ಕ್ಲಿಪ್‌ನಲ್ಲಿ ದೊಡ್ಡ ಪ್ರಮಾಣದ ಬೆಂಕಿಯ ಜೊತೆಗೆ ದಟ್ಟವಾದ ಹೊಗೆಯು ಹೊಲದಿಂದ ಹೊರಬರುವುದನ್ನು ಕಾಣಬಹುದು. ಶೇ.25ರಷ್ಟು ಬೆಳೆಗಳು ಬೆಂಕಿಗೆ ಆಹುತಿಯಾಗಿದ್ದು, ಉಳಿದಿದ್ದನ್ನು ಉಳಿಸಲು ರೈತರು ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಪಡೆದು 66 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 1ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಿಟ್ಟಿಸಿಕೊಂಡಿದೆ.
ಕೈವ್ ಪ್ರಕಾರ, ರಷ್ಯಾ ಸೋಮವಾರ ಪೂರ್ವ ಉಕ್ರೇನ್‌ನಲ್ಲಿರುವ ಪಟ್ಟಣದ ಮೇಲೆ ಶೆಲ್ ದಾಳಿ ನಡೆಸಿ ಆರು ಜನರನ್ನು ಕೊಂದಿತು. ಭಾನುವಾರ ತಡವಾಗಿ ಪ್ರಮುಖ ಕಾನೂನು ಜಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಪರ್ಯಾಯ ಭದ್ರತಾ ಮುಖ್ಯಸ್ಥರನ್ನು ನೇಮಿಸಿದ್ದಾರೆ. ಝೆಲೆನ್ಸ್ಕಿ ಅವರು ಸೋಮವಾರ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. “ರಷ್ಯಾದಿಂದ ಪ್ರಚೋದಿಸಲ್ಪಟ್ಟ ಜಾಗತಿಕ ಆಹಾರ ಬಿಕ್ಕಟ್ಟನ್ನು ತಡೆಗಟ್ಟಲು ಉಕ್ರೇನಿಯನ್ ಧಾನ್ಯ ರಫ್ತುಗಳನ್ನು ಪುನರಾರಂಭಿಸುವ ಪ್ರಾಮುಖ್ಯತೆಯನ್ನು ಚರ್ಚಿಸಲಾಗಿದೆ” ಎಂದು ಅವರು ಬರೆದಿದ್ದಾರೆ.
Published On - 11:34 am, Thu, 21 July 22