
ಅತ್ಯಂತ ಪ್ರೀತಿಪಾತ್ರರನ್ನು ಹಲವು ದಿನಗಳ ನಂತರ ಭೇಟಿಯಾದಾಗ ಪ್ರೀತಿ ಉಕ್ಕಿ ಬರುವುದು ಸಹಜ. ತನ್ನ ಒಡನಾಡಿಯನ್ನು ಬಿಟ್ಟು ದೂರು ಹೋಗಿ ಮತ್ತೆ ಬಳಿ ಬಂದಾಗ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಪ್ರೀತಿಯಿಂದ ವರ್ತಿಸುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾರಗಟ್ಟಲೆ ದೂರ ಉಳಿದಿದ್ದ ಎರಡು ಹಂಸಗಳು (Swans) ಮೊದಲ ಬಾರಿಗೆ ಮತ್ತೆ ಒಂದಾಗಿವೆ. ಈ ವೇಳೆ ಅವುಗಳು ತೋರಿದ ಪರಪಸ್ಪರ ಪ್ರೀತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್ (Video Viral) ಆಗುತ್ತಿದೆ. ಗಾಯಗೊಂಡು ಚಿಕಿತ್ಸೆ ಪಡೆದ ಹಂಸವನ್ನು ನೀರಿನಲ್ಲಿ ಒಂಟಿಯಾಗಿರುವ ಹಂಸದೊಂದಿಗೆ ಬಿಡುವುದನ್ನು ಮತ್ತು ಪರಸ್ಪರ ಪ್ರೀತಿಸುವುದನ್ನು ವಿಡಿಯೋ ತೋರಿಸುತ್ತದೆ.
ವಿಡಿಯೋದಲ್ಲಿ ಇರುವಂತೆ, ಒಬ್ಬ ವ್ಯಕ್ತಿಯು ಬಿಳಿ ಚೀಲದಲ್ಲಿ ಹಂಸವನ್ನು ಇಟ್ಟುಕೊಂಡು ಕೊಳದ ಬಳಿ ಬರುತ್ತಾನೆ. ನಂತರ ಚೀಲವನ್ನು ಬಿಚ್ಚಿ ಹಂಸವನ್ನು ನೀಡಿಗೆ ಬಿಟ್ಟಾಗ ಅದು ಹೋಗಿ ತನ್ನ ಸಂಗಾತಿಯನ್ನು ಸೇರಿಕೊಳ್ಳುತ್ತದೆ. ಈ ವೇಳೆ ಹಲವು ದಿನಗಳ ನಂತರ ಒಟ್ಟಾದ ಖುಷಿಯಲ್ಲಿ ಎರಡು ಹಂಸಗಳು ಪರಸ್ಪರ ಪ್ರೀತಿಸಿವೆ. ಪ್ರೀತಿಯ ಹಾವಭಾವನ್ನು ನೋಡಲು ಕಣ್ಣುಗಳೆರಡು ಸಾಲದೆಂಬಂತಿದೆ.
Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಹಂಸಗಳ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ವಾರಗಳ ನಂತರ ಮೊದಲ ಬಾರಿಗೆ ಹಂಸಗಳು ಮತ್ತೆ ಒಂದಾಗುತ್ತಿವೆ” ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದು ನೆಟ್ಟಗರ ಮನಗೆದ್ದುಕೊಂಡಿದ್ದು, 2.4 ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್ಗಳು, 12ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳು ಆಗಿವೆ.
ಪಕ್ಷಿ ಗಾಯಗೊಂಡ ಹಿನ್ನೆಲೆ ಚಿಕಿತ್ಸೆಗಾಗಿ ಕರೆದೊಯ್ದು ಮತ್ತೆ ಬಿಡಲಾಗಿದೆ ಎಂದು ಬಳಕೆದಾರರು ಊಹಿಸಿದ್ದಾರೆ. “ಬ್ಯಾಗ್ನಲ್ಲಿರುವ ಹಂಸ ದೈಹಿಕವಾಗಿ ಗಾಯಗೊಂಡಿರಬಹುದು ಅಥವಾ ಅನಾರೋಗ್ಯದಿಂದ ಕೂಡಿರಬಹುದು” ಎಂದು ನೆಟ್ಟಿಗರೊಬ್ಬರು ತನ್ನ ಊಹೆಯನ್ನು ತಿಳಿಸಿದ್ದಾರೆ. ಪ್ರೀತಿಯ ಶಕ್ತಿಯು ಭೂಮಿಯ ಎಲ್ಲಾ ಜೀವಿಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿದ ಇನ್ನೊಬ್ಬ ಬಳಕೆದಾರರು, ಜೀವಿಗಳ ಸೌಂದರ್ಯ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು.
ಹಂಸಗಳು ಏಕಪತ್ನಿ ಜೀವಿಗಳು. ಒಮ್ಮೆ ಅವುಗಳು ತಮ್ಮ ಸಂಗಾತಿಯನ್ನು ಆರಿಸಿಕೊಂಡರೆ ಅವುಗಳೊಂದಿಗೆಯೇ ಜೀವನದ ಬಂಧವನ್ನು ಬೆಸೆಯುತ್ತವೆ. ಮಾನವರಂತೆಯೇ ಹಂಸಗಳು ಸಹ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುತ್ತವೆ ಮತ್ತು ಕೆಲವೊಮ್ಮೆ ಬಿಡುತ್ತವೆ. ಹೆಚ್ಚಿನ ಹಂಸ ದಂಪತಿಗಳು ಸಾಮಾನ್ಯವಾಗಿ ಜೀವನದುದ್ದಕ್ಕೂ ಒಟ್ಟಿಗೆ ಇರುತ್ತವೆ. ಸಂಗಾತಿ ಸಾವನ್ನಪ್ಪಿದಾಗ ಅವುಗಳು ಮತ್ತೊಂದು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ.
Published On - 12:48 pm, Sun, 17 July 22