Viral Video : ಕಲೆ ಇರುವುದೇ ಸಂತೋಷ ಪಡೆಯುವುದಕ್ಕೆ. ಕಲೆಯ ಕಲಿಕೆಗೆ ವಯಸ್ಸು ಎಂದೂ ಸಮಸ್ಯೆ ಅಲ್ಲ. ಹಾಗೆ ಪ್ರದರ್ಶನಕ್ಕೂ. ಪ್ರದರ್ಶನದ ಬಗ್ಗೆ ಯೋಚಿಸಿದರೆ ಇಂದು ದೊಡ್ಡ ದೊಡ್ಡ ವೇದಿಕೆಯೇ ಆಗಬೇಕಂತಿಲ್ಲ. ಎಲ್ಲಿರುತ್ತೀರೋ ಅಲ್ಲಿಂದಲೇ ನರ್ತಿಸಿ ಸಾಮಾಜಿಕ ಜಾಲತಾಣಗಳಿಗೆ ರೀಲ್ ಮಾಡಿ ಹಾಕಬಹುದು. ನೆಟ್ಟಿಗರೇ ವೀಕ್ಷಕಪ್ರಭುಗಳು. ಅಂತಿಮವಾಗಿ ಕಲೆಯ ಸಾರ್ಥಕತೆ ಏನು? ಖುಷಿಪಡು, ಖುಷಿಪಡಿಸು. ಇದು ಸಂವಾದಮುಖಿ. ಸುಮಾರು 23 ವರ್ಷಗಳಿಂದಲೂ ಕೇಳಿಬರುತ್ತಿರುವ ಸೂಪರ್ ಹಿಟ್ ಹಾಡು ‘ರಂಗೀಲೋ ಮಾರೋ ಢೋಲನಾ’ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಶುಭಾ ಮುದ್ಗಲ್ ಮತ್ತು ಗಾಯಕ ಸುಖ್ವಿಂದರ್ ಸಿಂಘ್ ಹಾಡಿರುವ ಹಾಡಿದು. ಶಾಲಾಕಾಲೇಜು ವಾರ್ಷಿಕೋತ್ಸವದ ರಾಷ್ಟ್ರಗೀತೆ ಎಂಬಂತೆ ಇದು ಜನಜನಿತವಾಗಿತ್ತು. ಈ ಹಾಡಿಗೆ ನರ್ತಿಸಿದ್ದಾಳೆ ಈ ಯುವತಿ.
ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೀಗೆ ಖಾತೆದಾರರು ನಿಯಮಿತವಾಗಿ ರೀಲ್ಸ್ ಮಾಡುತ್ತಿರುತ್ತಾರೆ. Pranalimusic and Dheerajpatil ಎಂಬ ಇನ್ಸ್ಟಾಗ್ರಾಂ ಪುಟವನ್ನು ನಿರ್ವಹಿಸುತ್ತಿರುವ ಈ ಯುವತಿ ಹೀಗೆ ಟೆರೇಸ್ ಮೇಲೆ ಹೋಗಿ ಶುಭಾ ಮುದ್ಗಲ್ ಅವರ ಹಾಡಿಗೆ ನರ್ತಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇದು ನಾನು ಬಾಲ್ಯದಲ್ಲಿ ಕೇಳುತ್ತಿದ್ದ ನನ್ನ ಮೆಚ್ಚಿನ ಹಾಡು ಎಂದು ಕ್ಯಾಪ್ಷನ್ ಸೇರಿಸಿದ್ದಾರೆ. ಈ ವಿಡಿಯೋ 38,000ಕ್ಕೂ ಹೆಚ್ಚು ಜನರಿಗೆ ಇಷ್ಟವಾಗಿದೆ. ಬಹಳ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದ್ದೀರಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ವಾವ್ ನಿಮ್ಮ ನೃತ್ಯ ಬಹಳ ಚೆನ್ನಾಗಿದೆ, ಸದಾ ಸುಖಿಯಾಗಿರಿ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಎನರ್ಜಿ ಲೆವಲ್ ಬಹಳ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದಿದ್ದಾರೆ ಮಗದೊಬ್ಬರು.
ಹಾಡು ಹಳೆಯದಾದರೇನು ಭಾವ ನವನವೀನ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:08 pm, Thu, 20 October 22