ಸ್ಮಾರ್ಟ್ಫೋನ್ ಖರೀದಿಸಲು ತನ್ನ ರಕ್ತ ಮಾರಲು ಪ್ರಯತ್ನಿಸಿದ 16ರ ಹುಡುಗಿ
Girl tries to sell her blood : ‘ಇನ್ನೇನು 9,000 ಮೌಲ್ಯದ ಸ್ಮಾರ್ಟ್ಫೋನ್ ಡೆಲಿವರಿ ಆಗುತ್ತದೆ. ನನ್ನ ರಕ್ತ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಹಣ ಕೊಡಿ’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಕೇಳಿಕೊಂಡಿದ್ದಾಳೆ ಪಶ್ಚಿಮಬಂಗಾಳದ ಈ ಹುಡುಗಿ.
Trending : ಎಲ್ಲರ ಬಳಿ ಸ್ಮಾರ್ಟ್ಫೋನ್ ಇದೆ, ನನಗೂ ನನ್ನದೇ ಆದ ಸ್ಮಾರ್ಟ್ಫೋನ್ ಬೇಕು ಅನ್ನಿಸುವುದಿಲ್ಲವಾ? ನನಗೂ ಕೊಡಿಸು ಎಂದು ಮುಲಾಜಿಲ್ಲದೇ ಇಂದು ಪುಟ್ಟಮಕ್ಕಳೂ ನಿರ್ಭಿಡೆಯಿಂದ ಕೇಳುವಂಥ ಕಾಲವಿದು. ಇನ್ನು ಹದಿಹರೆಯದ ಮಕ್ಕಳ ಮನಸ್ಸಿನಲ್ಲಿ ಸ್ಮಾರ್ಟ್ಫೋನ್ ಹೊಂದಲು ಏನೆಲ್ಲ ಆಲೋಚನೆಗಳು ದಾಂಗುಡಿ ಇಡುತ್ತಿರಬಹುದು? ಇದಕ್ಕೆ ಉದಾಹರಣೆ ಎಂಬಂತೆ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ ದಿನಾಜ್ಪುರದ ತಪನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಆತಂಕ ಪಡುವಂಥ ಒಂದು ಘಟನೆ ನಡೆದಿದೆ. ಕರಾಡಾದ 16 ವರ್ಷದ ಹುಡುಗಿಯೊಬ್ಬಳು ಸ್ಮಾರ್ಟ್ ಫೋನ್ ಖರೀದಿಸಲೆಂದು ತನ್ನ ರಕ್ತವನ್ನು ಮಾರಲು ಪ್ರಯತ್ನಿಸಿದ್ದು ವರದಿಯಾಗಿದೆ. 12ನೇ ತರಗತಿ ಓದುತ್ತಿರುವ ಈ ಹುಡುಗಿ ರೂ. 9000 ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಾಳೆ.
ಆರ್ಡರ್ ಮಾಡುವುದೇನೋ ಮಾಡಿಬಿಟ್ಟಿದ್ದಾಳೆ. ಆದರೆ ಅಷ್ಟೊಂದು ಹಣವನ್ನು ಹೇಗೆ ಹೊಂದಿಸಬೇಕು? ಮನೆಯಲ್ಲಿ ಯಾರಾದರೂ ಬಳಿ ಕೇಳಹೊರಟರೆ ಗುಟ್ಟು ರಟ್ಟಾಗುತ್ತದೆ. ಇನ್ನು ಸ್ನೇಹಿತರ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಆಗ ಆಕೆಗೆ ಹೊಳೆದದ್ದು ರಕ್ತದಾನ ಮಾಡಿ ಹಣವನ್ನು ಪಡೆಯುವುದು. ಸಮೀಪದ ಬಾಲೂರ್ಘಾಟ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನಿಸಿದ್ದಾಳೆ.
ಆ ಪ್ರಕಾರ ಆಸ್ಪತ್ರೆಗೆ ತಲುಪಿ ಸಿಬ್ಬಂದಿಯೊಂದಿಗೆ ಮಾತನಾಡಿ, ರಕ್ತದಾನಕ್ಕೆ ಪ್ರತಿಯಾಗಿ ಹಣವನ್ನು ಕೊಡಬೇಕೆಂದು ಕೇಳಿಕೊಂಡಿದ್ದಾಳೆ. ಅವಳ ಈ ನಡೆ ಆಸ್ಪತ್ರೆಯ ಸಿಬ್ಬಂದಿಗೆ ಅಸಹಜವೆನ್ನಿಸಿದೆ. ‘ಆ ಹುಡುಗಿ ಆಸ್ಪತ್ರೆಗೆ ಬಂದು, ತಾನು ರಕ್ತದಾನ ಮಾಡುತ್ತೇನೆ. ಆದರೆ ಅದರ ಬದಲಾಗಿ ಹಣ ಕೊಡಬೇಕು ಎಂದು ಕೇಳಿದಳು. ನಿಜಕ್ಕೂ ಇದನ್ನು ಕೇಳಿ ಆಘಾತ ಮತ್ತು ಅನುಮಾನ ಉಂಟಾಯಿತು’ ಎಂದು ಬ್ಲಡ್ ಬ್ಯಾಂಕ್ನ ಕನಕ್ ದಾಸ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಯು ತಕ್ಷಣವೇ ಮಕ್ಕಳ ಚೈಲ್ಡ್ ಕೇರ್ ಡಿಪಾರ್ಟ್ಮೆಂಟ್ಗೆ ಈ ವಿಷಯವನ್ನು ತಿಳಿಸಲಾಗಿ, ಚೈಲ್ಡ್ ಕೇರ್ ಡಿಪಾರ್ಟ್ಮೆಂಟ್ನ ಸದಸ್ಯೆ ರೀಟಾ ಮಹ್ತೋ ಈ ಹುಡುಗಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ‘ಇನ್ನೇನು ಸದ್ಯದಲ್ಲೇ ನನ್ನ ಸ್ಮಾರ್ಟ್ಫೋನ್ ಡೆಲಿವರಿ ಆಗಲಿದೆ. ಆದ್ದರಿಂದ ಅದಕ್ಕಾಗಿ ಹಣವನ್ನು ಹೊಂದಿಸಲು ಹೀಗೆಲ್ಲ ಯೋಚಿಸಿದೆ’ ಎಂದು ರೀಟಾ ಅವರಿಗೆ ತಿಳಿಸಿದ್ದಾಳೆ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:22 am, Thu, 20 October 22