ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ವಿಶ್ವದಾದ್ಯಂತ ಕೋಟ್ಯಂತರ ಜನರ ಕನಸು ನನಸಾಗುವ ಹಂತ ಸಮೀಪಿಸಿದೆ. ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ಸಮಯ ನಿಗದಿಪಡಿಸಲಾಗಿದೆ. ಜನವರಿ 22, 2024 ರಂದು ಅಭಿಜಿತ್ ಲಗ್ನ, ಮೃಗಶಿರ ನಕ್ಷತ್ರದಲ್ಲಿ 12:20 ಕ್ಕೆ ಶ್ರೀರಾಮನ ಮೂರ್ತಿಯ ಪ್ರತಿಷ್ಠೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚಲನಚಿತ್ರ, ರಾಜಕೀಯ, ಕ್ರೀಡಾ ಕ್ಷೇತ್ರದ ಗಣ್ಯರು, ಸಂತರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸಂಭ್ರಮ ಸಮೀಪಿಸುತ್ತಿದ್ದಂತೆ ಗುಜರಾತಿನ ವಜ್ರದ ವ್ಯಾಪಾರಿಯೊಬ್ಬರು ಅಯೋಧ್ಯೆಯ ರಾಮ ಮಂದಿರ ವಿನ್ಯಾಸವನ್ನು ಹೋಲುವ ವಜ್ರದ ನೆಕ್ಲೇಸ್ ಒಂದನ್ನು ತಯಾರಿಸಿದ್ದಾರೆ. ಈ ವಜ್ರದ ನೆಕ್ಲೇಸ್ ಅನ್ನು ಜನವರಿ 22 ರಂದು ಅಯೋಧ್ಯೆ ದೇವಸ್ಥಾನ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮನ ಮೂರ್ತಿಗೆ ಆಭರಣವಾಗಿ ಈ ವಜ್ರದ ನೆಕ್ಲೇಸ್ನ್ನು ತಯಾರಿಸಲಾಗಿದೆ. ಈ ವಜ್ರದ ಹಾರ ತಯಾರಿಕೆಯಲ್ಲಿ 5 ಸಾವಿರ ಅಮೆರಿಕನ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಬಳಸಲಾಗಿದೆ. ಇದಲ್ಲದೇ ದೇವಾಲಯದ ಮಾದರಿಯ ವಿನ್ಯಾಸಕ್ಕೆ 3 ಸಾವಿರ ವಜ್ರಗಳನ್ನು ಬಳಸಿದ್ದು, ಇದರೊಂದಿಗೆ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತನ ವಿಗ್ರಹಗಳನ್ನೂ ಕೂಡ ಕಾಣಬಹುದು. ಒಟ್ಟು 40 ಕುಶಲಕರ್ಮಿಗಳು 35 ದಿನಗಳಲ್ಲಿ ವಿನ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ವಜ್ರದ ನೆಕ್ಲೇಸ್ ಅನ್ನು ಜನವರಿ 22 ರಂದು ಅಯೋಧ್ಯೆ ದೇವಸ್ಥಾನ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. ಸದ್ಯ ಈ ವಿಶೇಷ ವಿನ್ಯಾಸದ ನೆಕ್ಲೇಸ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
#WATCH | Surat, Gujarat: A diamond merchant from Surat has made a necklace on the theme of the Ram temple using 5000 American diamonds and 2 kg silver. 40 artisans completed the design in 35 days. pic.twitter.com/nFh3NZ5XxE
— ANI (@ANI) December 18, 2023
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯ ಶಿಲ್ಪಿಗೆ ಆಹ್ವಾನ
ಮತ್ತೊಂದೆಡೆ, ರಾಮಮಂದಿರ ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ, ಪ್ರಾಣ ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಗಲಿದೆ ಎಂದು ಟ್ರಸ್ಟ್ ಬೋರ್ಡ್ ವರದಿ ಮಾಡಿದೆ. ಅಯೋಧ್ಯೆಯಲ್ಲಿ 4.40 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಸೌಲಭ್ಯ ಕೇಂದ್ರವನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: