ಚರಂಡಿ ಕಾಮಗಾರಿಗೆಂದು ಅಗೆದಿದ್ದ ಹೊಂಡದಲ್ಲಿ ಬಿದ್ದ ಮಹಿಳೆ, ವಿಡಿಯೋ ವೈರಲ್

Tamil Nadu News: ತಮಿಳುನಾಡಿನ ಅನೇಕ ಪ್ರದೇಶಗಳಲ್ಲಿ ಆರಂಭಿಸಿರುವ ಮಳೆನೀರು ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಇದು ಸಾರ್ವಜನಿಕರಿಗೆ ಕಟ್ಟಿಟ್ಟ ಅಪಾಯದ ಬುತ್ತಿ.

ಚರಂಡಿ ಕಾಮಗಾರಿಗೆಂದು ಅಗೆದಿದ್ದ ಹೊಂಡದಲ್ಲಿ ಬಿದ್ದ ಮಹಿಳೆ, ವಿಡಿಯೋ ವೈರಲ್
ಹೊಂಡದಲ್ಲಿ ಬಿದ್ದ ಮಹಿಳೆ
Updated By: Digi Tech Desk

Updated on: Oct 07, 2022 | 1:17 PM

Viral Video : ಎಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಅನೇಕ ಅವಘಡಗಳು ಸಂಭವಿಸುತ್ತಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ತಮಿಳುನಾಡಿನ ಚೆಂಗಲ್‌ಪೇಟೆಯ ಮಹಿಳೆಯೊಬ್ಬರು ಮಳೆನೀರಿನ ಚರಂಡಿ ಕಾಮಗಾರಿಗಾಗಿ ಅಗೆದಿದ್ದ ಹೊಂಡದಲ್ಲಿ ಬಿದ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಹೊಂಡವು ತುಂಬಿಹೋಗಿತ್ತು. ಇದನ್ನು ಗಮನಿಸದ ಆ ಮಹಿಳೆ ತಮ್ಮ ಮನೆಯ ಎದುರಿಗೆ ತೋಡಿದ್ದ ಹೊಂಡಕ್ಕೆ ಬಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗುತ್ತಿದೆ.

ವಾರ್ಡ್ ನಂಬರ್ 12ರ ನಿವಾಸಿಯಾಗಿರುವ ಈ ಮಹಿಳೆ ತಮ್ಮ ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎದೆಮಟ್ಟದ ತನಕ ನೀರು ಆವರಿಸಿದರೂ ಧೈರ್ಯದಿಂದ ಯಶಸ್ವಿಯಾಗಿ ಹೊಂಡವನ್ನು ದಾಟಿಕೊಂಡು ಹೊರಬಂದಿದ್ದಾರೆ. ನಂತರ ಸ್ಥಳೀಯರು ರಸ್ತೆದಾಟಲು ಈಕೆಗೆ ಸಹಾಯ ಮಾಡಿದ್ದಾರೆ. ಯಾವುದೇ ಗಾಯನೋವುಗಳು ಸಂಭವಿಸಿಲ್ಲದೇ ಇರುವುದು ಅದೃಷ್ಟ.

ಮಾನ್ಸೂನ್​ ಪೂರ್ವ ಈ ಮಳೆಯು ಮುಡಿಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದಿದೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರದವರೆಗೂ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಈ ಮಧ್ಯೆ, ತಮಿಳುನಾಡಿನ ಅನೇಕ ಪ್ರದೇಶಗಳಲ್ಲಿ ಆರಂಭಿಸಿರುವ ಮಳೆನೀರು ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಇದು ಸಾರ್ವಜನಿಕರಿಗೆ ಕಟ್ಟಿಟ್ಟ ಅಪಾಯದ ಬುತ್ತಿ. ಸೆಪ್ಟೆಂಬರ್​ನಲ್ಲಿ ಚೆನ್ನೈ ಹೊರವಲಯದಲ್ಲಿ ಅಗೆದಿದ್ದ ಮಳೆನೀರಿನ ಚರಂಡಿಯೊಳಗೆ ವ್ಯಕ್ತಿಯೊಬ್ಬ ಬೈಕ್​ಸಮೇತ ಬಿದ್ದಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

 

Published On - 1:08 pm, Fri, 7 October 22