Viral Video : ಬೀಟ್ರೂಟ್ ಇಡ್ಲಿ, ಕ್ಯಾರೆಟ್ ಇಡ್ಲಿ, ಪಾಲಕ್ ಇಡ್ಲಿ ಹೀಗೆ ಸಾಕಷ್ಟು ಬಣ್ಣಬಣ್ಣದ ಇಡ್ಲಿಗಳ ಸಾಲಿಗೆ ಸೇರುತ್ತಿದೆ ಈ ಆಕಾಶ ನೀಲಿ ಇಡ್ಲಿ. ಶಂಖಪುಷ್ಟದ (Butterfly pea flowers) ರಸವನ್ನು ಬೆರೆಸಿ ಮಾಡಿದ್ದಕ್ಕೆ ಈ ಇಡ್ಲಿ ಹೀಗೆ ಈ ಬಣ್ಣಕ್ಕೆ ತಿರಗುಕೊಂಡಿದೆ. ನೆಟ್ಟಿಗರು ಈ ಕಣ್ಣುಬಿಟ್ಟು ನೋಡುತ್ತಲೇ ಇದ್ದಾರೆ. ನೋಡುವುದಕ್ಕಂತೂ ಬಹಳ ಚೆಂದವಿದೆ ರುಚಿ ಹೇಗಿದೆಯೋ ಎಂದೆಲ್ಲ ಕೇಳುತ್ತಿದ್ಧಾರೆ. ಜ್ಯೋತೀಸ್ ಕಿಚನ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ Blue Pea Idli ವಿಡಿಯೋ ಹಂಚಿಕೊಳ್ಳಲಾಗಿದೆ.
ಈವತ್ತು ಕೃತಕ ಬಣ್ಣಗಳನ್ನು ಬೆರೆಸಿ ಅಡುಗೆ ಮಾಡಿ ಆಕರ್ಷಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕೃತಕ ಬಣ್ಣಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರ ಬದಲಾಗಿ ನಿಸರ್ಗದತ್ತ ತರಕಾರಿ, ಸೊಪ್ಪು, ಹೂಗಳನ್ನು ಕುದಿಸಿ ರಸತೆಗೆದು ಅಡುಗೆಗೆ ಬೆರೆಸಿದರೆ ಬಣ್ಣದ ಜೊತೆಗೆ ಪೋಷಕಾಂಶಗಳು ನಮ್ಮ ಹೊಟ್ಟೆ ಸೇರುತ್ತವೆ. ಇಂಥ ಪ್ರಯೋಗಗಳು ಇದೀಗ ಇಂಟರ್ನೆಟ್ನಲ್ಲಿ ಕಾಣಸಿಗುತ್ತಿವೆ. ಇವೆಲ್ಲವೂ ಹಳೆಯ ಅಡುಗೆ ರಹಸ್ಯಗಳೇ! ಆದರೆ ಫಾಸ್ಟ್ಲೈಫ್ನಲ್ಲಿ ಯಾರಿಗೆ ಇದೆಲ್ಲವನ್ನು ಹೆಕ್ಕಿ ತೆಗೆಯುವ ಸಮಯವಿತ್ತು. ಕೊರೊನಾದ ಗೃಹಬಂಧನದಲ್ಲಿ ಹೀಗೆ ತರಹೇವಾರಿ ಪ್ರಯೋಗಗಳ ವಿಡಿಯೋಗಳೆಲ್ಲ ಇಂದು ಇಂಟರ್ನೆಟ್ಟಿನಲ್ಲಿ ಬಂದು ಕೂತಿವೆ. ಇದು ಹೀಗೇ ಮುಂದುವರಿಯುತ್ತ ನೆಟ್ಟಿಗರನ್ನು ಸೆಳೆಯುತ್ತಿದೆ.
ಈ ತನಕ ಈ ವಿಡಿಯೋ ಅನ್ನು 8.2 ಲಕ್ಷ ಜನ ನೋಡಿದ್ದಾರೆ. ಸುಮಾರು 32,000 ಜನ ಇಷ್ಟಪಟ್ಟಿದ್ದಾರೆ. ಈ ಹೂಗಳು ಸೇವನೆಗೆ ಯೋಗ್ಯ. ಇದರಿಂದ ಚಹಾ ಕೂಡ ಮಾಡುತ್ತಾರೆ ಎಂದಿದ್ದಾರೆ ಒಬ್ಬರು. ಅಯ್ಯೋ ದೇವರೇ ಏನಿದೆಲ್ಲ ಇಡ್ಲಿಯನ್ನು ಹೀಗೆಲ್ಲ ನೋಡಲಾಗದು ಎಂದಿದ್ದಾರೆ ಇನ್ನೂ ಒಬ್ಬರು. ಬಹಳ ಚೆನ್ನಾಗಿದೆ ನೋಡಲು ಮತ್ತು ಆರೋಗ್ಯಕ್ಕೂ ಎಂದಿದ್ದಾರೆ ಮತ್ತೊಬ್ಬರು. ಇದು ನಾರ್ಮಲ್ ಇಡ್ಲಿಯಂತೆಯೇ ರುಚಿ ಇರುತ್ತದೆಯಾ ಅಥವಾ ಬೇರೆ ಇರುತ್ತದೆಯಾ ಎಂದಿದ್ಧಾರೆ ಮಗದೊಬ್ಬರು. ಇದಕ್ಕೆ ಪ್ರತ್ಯುತ್ತರವಾಗಿ ಜ್ಯೋತೀಸ್ ಕಿಚನ್ ನಿರ್ವಹಿಸುತ್ತಿರುವ ಖಾತೆದಾರರು, ಮಾಮೂಲಿ ಇಡ್ಲಿ ಹೇಗಿರುತ್ತದೆಯೋ ಹಾಗೇ ಇರುತ್ತದೆ ಎಂದಿದ್ದಾರೆ.
ನಿಮಗೂ ಇಂಥ ಇಡ್ಲಿ ಇಷ್ಟವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ