Trending : ನಮ್ಮಲ್ಲಿ ಸಾಕಷ್ಟು ಜನರು ಹಕ್ಕಿಗಳಿಗೆ ಪ್ರಾಣಿಗಳಿಗೆ ನಿತ್ಯವೂ ಆಹಾರ ಕೊಡುವುದನ್ನು ರೂಢಿಸಿಕೊಂಡಿರುತ್ತಾರೆ. ಆಗ ಕೊಡುವವರಲ್ಲಿ ಪಡೆಯುವವರಲ್ಲಿ ಒಂದು ರೀತಿಯ ಬಾಂಧವ್ಯ ರೂಪುಗೊಂಡಿರುತ್ತದೆ. ಪಕ್ಷಿಗಳು ಆಹಾರ ತಿನ್ನುವಷ್ಟು ಹೊತ್ತು ಅವುಗಳನ್ನು ಗಮನಿಸುತ್ತ ಆನಂದ ಪಡೆಯುವ ಕೆಲವರು ಆ ಕ್ಷಣಗಳನ್ನು ವಿಡಿಯೋ, ಫೋಟೋ ಅಥವಾ ಬರಹದ ಮೂಲಕ ಹಿಡಿದಿಟ್ಟು ಸಾರ್ಥಕತೆಯನ್ನು ಅನುಭವಿಸುತ್ತಾರೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆಗ ಸಮಾನ ಮನಸ್ಕರಿಂದ ಮೆಚ್ಚುಗೆ, ಪ್ರತಿಕ್ರಿಯೆ ಲಭಿಸುತ್ತಿದ್ದಂತೆ ಆ ದಿನದ ಖುಷಿಯ ಬಾಬತ್ತು ಅವರದಾಗುತ್ತದೆ. ಜಂಜಡದ ಬದುಕಿನಲ್ಲಿ ಅರೆಗಳಿಗೆ ಸಂತಸಕ್ಕಾಗಿ ಏನೆಲ್ಲ ಉಪಾಯಗಳು? ಈ ಉಪಾಯಗಳನ್ನೇ ಕೆಲವರು ಹವ್ಯಾಸದಂತೆ ಮಾರ್ಪಾಡು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಇದು ನಿತ್ಯಧ್ಯಾನ.
ಟ್ವಿಟರ್ ಖಾತೆದಾರರಾದ ಕೊಲೀನ್ ಲಿಂಡ್ಸೆ ಹೀಗೆ ಹಾರಿ ಬಂದ ಕಾಗೆಗೆ ಸ್ವಲ್ಪ ಪೇಸ್ಟ್ರಿ ಕೊಟ್ಟಿದ್ದಾರೆ. ಪೇಸ್ಟ್ರಿ ಅಂದಮೇಲೆ ಕೇಳಬೇಕೆ? ರುಚಿಗೆ ಮರುಳಾಗಿ ಹೋಗಿದ್ದಾರೆ ಕಾಕರಾಯರು! ನೋಡಿದರೆ ಕೆಲ ಕ್ಷಣಗಳಲ್ಲೇ ಮರಳಿ, ಕೊಲೀನ್ಗೆ ಪ್ರತಿಯಾಗಿ ಪುಟ್ಟ ಉಡುಗೊರೆಯನ್ನೂ ಕೊಟ್ಟಿದ್ದಾರೆ.
Shared a bit of pastry with a crow down by the Lake Union waterfront. Crow brought me a gift: a little stone. He rolled it over to my feet with his beak. ❤️ pic.twitter.com/BSWTq3doCA
— Colleen Lindsay (@ColleenLindsay) September 2, 2022
ಉಡುಗೊರೆ ಯಾರನ್ನು ಪುಳಕಗೊಳಿಸುವುದಿಲ್ಲ? ಅದೂ ಪಕ್ಷಿಯಿಂದ! ಎಂಥ ಅನಿರೀಕ್ಷಿತ ಸಂಭ್ರಮವಿದು. ಮಾತನಾಡಲು ಬಂದಿದ್ದರೆ ಥ್ಯಾಂಕ್ಸ್ ಹೇಳುತ್ತಿತ್ತೇನೋ. ಪಕ್ಷಿಗಳಲ್ಲಿಯೂ ಈ ರೀತಿಯಾಗಿ ಸ್ಪಂದಿಸುವ ಮನೋಭಾವ ಇದೆ ಎನ್ನುವ ವಿಷಯ ಓದಿ, ನೋಡಿಯೇ ಮನಸ್ಸು ಅರಳುತ್ತಿದೆ. ಇನ್ನು ಈ ಅನಿರೀಕ್ಷಿತ ಗಳಿಗೆಗಳನ್ನು ಅನುಭವಿಸಿದ ಕೊಲೀನ್ಗೆ ಹೇಗನ್ನಿಸಿರಬೇಡ?
ತಕ್ಷಣವೇ ಕೊಲೀನ್, ಕಾಗೆ ಕೊಟ್ಟ ಗಿಫ್ಟ್-ಸಣ್ಣ ಕಲ್ಲಿನ ಫೋಟೋ ತೆಗೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ 58,000 ಕ್ಕೂ ಹೆಚ್ಚು ಜನರ ಮೆಚ್ಚಿಗೆ ಗಳಿಸಿದೆ. 3,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪಕ್ಷಿಗಳೊಂದಿಗಿನ ಇಂಥ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ ಖಾತೆದಾರರೊಬ್ಬರು, ‘ಆಹಾರಕ್ಕಾಗಿ ಅವು ಹೀಗೆ ಗಿಫ್ಟ್ ಕೊಡುತ್ತವೆ. ನನಗೆ ಪರಿಚಯವಿರುವ ಚಿಕ್ಕ ಹುಡುಗಿಯೊಬ್ಬಳು ಒಂದೇ ಕಾಗೆಯಿಂದ ಪಡೆದ ಗಿಫ್ಟ್ಗಳನ್ನೆಲ್ಲ ಇಟ್ಟುಕೊಂಡಿದ್ದನ್ನು ಗಮನಿಸಿದ್ದೇನೆ. ಚಿಕ್ಕ ಗಾಜಿನ ತುಂಡು, ಕಿವಿಯೋಲೆ, ಕಲ್ಲು ಹೀಗೆ 20 ಕ್ಕೂ ಹೆಚ್ಚು ವಸ್ತುಗಳನ್ನು ಆಕೆ ಕಪ್ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾಳೆ. ಕಾಗೆಗಳು ಅತ್ಯಂತ ಬುದ್ಧಿವಂತ ಹಕ್ಕಿಗಳು’ ಎಂದಿದ್ದಾರೆ.
‘ನೀವು ಕಾಗೆಗಳಿಗೆ ನಿಯಮಿತವಾಗಿ ಆಹಾರ ನೀಡಲಾರಂಭಿಸಿದರೆ ಅವುಗಳು ನಿಮ್ಮೊಂದಿಗೆ ಸ್ಪಂದಿಸಲಾರಂಭಿಸುತ್ತದೆ. ಏನಾದರೂ ಕೆಡಕು ಉಂಟಾಗುತ್ತಿದೆ ಎಂಬಂತಾದಲ್ಲಿ ನಿಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತವೆ. ಹೀಗೆ ಆಗಾಗ ಉಡುಗೊರೆಗಳನ್ನು ತಂದು ನಿಮ್ಮನ್ನು ಅಚ್ಚರಿಗೆ ಬೀಳಿಸುತ್ತವೆ. ಅಕಸ್ಮಾತ್ ನಿಮ್ಮ ಉದ್ದೇಶ ಕೆಟ್ಟದಾಗಿದ್ದರೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡವು. ಹಾಗಾಗಿ ಕಾಗೆಗಳಿಗೆ ಸದಾ ದಯೆತೋರಿ’ ಎಂದಿದ್ದಾರೆ.
ದಯೆಯೇ ಧರ್ಮದ ಮೂಲ ಎಂದು ಎಲ್ಲ ಧರ್ಮಗಳೂ ಹೇಳಿದ್ದು ಈ ಪ್ರಕೃತಿ ಮತ್ತು ಜೀವಸಂಕುಲವನ್ನು ಗಮನಿಸಿಯೇ ಅಲ್ಲವೆ?
ಕೊಲೀನ್ ಕಾಗೆ ಕೊಡುವ ಗಿಫ್ಟ್ಗಾಗಿ ನಾಳೆ ಮತ್ತೇನು ತಿಂಡಿ ಕೊಡಲು ಆಲೋಚಿಸುತ್ತಿದ್ದಾರೋ?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:51 pm, Fri, 9 September 22