ಅಪ್ಪ ಎಂದ್ರೆ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಹೆಣ್ಣು ಮಕ್ಕಳಿಗಂತೂ ಅಪ್ಪನೇ ಎಲ್ಲಾ. ಅಮ್ಮ ಎನ್ನುವ ದೇವತೆ ಮಕ್ಕಳನ್ನು ಹೊತ್ತು, ಹೆತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಜವಾಬ್ದಾರಿಗಳ ನಡುವೆಯೂ ಮಕ್ಕಳಿಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ಕಥೆಯೊಂದು ಇದೀಗ ವೈರಲ್ ಆಗಿದ್ದು, ಇಲ್ಲೊಬ್ಬ ತಂದೆ, ತಾಯಿಯನ್ನು ಕಳೆದುಕೊಂಡ ತನ್ನ ಪುಟಾಣಿ ಮಗು ಮನೆಯಲ್ಲಿ ಒಬ್ಬಂಟಿಯಾಗಿರಬಾರದೆಂದು ಕಷ್ಟವಾದ್ರೂ ಬಹಳ ಇಷ್ಟಪಟ್ಟು ಪ್ರತಿನಿತ್ಯ ತನ್ನ ಮುದ್ದಿನ ಮಗಳನ್ನು ಕಂಕುಳಲ್ಲಿ ಹೊತ್ತುಕೊಂಡೇ ಫುಡ್ ಡೆಲಿವರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಈ ಹೃದಯ ಸ್ಪರ್ಶಿ ಕಥೆಗೆ ನೆಟ್ಟಿಗರು ಭಾವುಕರಾಗಿದ್ದಾರೆ.
ಈ ಹೃದಯಸ್ಪರ್ಶಿ ಕಥೆಯನ್ನು ನವದೆಹಲಿಯ ಖಾನ್ ಮಾರ್ಕೆಟ್‌ನಲ್ಲಿರುವ ಸ್ಟಾರ್‌ಬಕ್ಸ್‌ನ ಮ್ಯಾನೇಜರ್ ದೇವೇಂದ್ರ ಮೆಹ್ರಾ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಝೊಮಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಸೋನು ಎಂಬವರು ಆರ್ಡರ್ ತೆಗೆದುಕೊಳ್ಳುವ ಸಲುವಾಗಿ ನವದೆಹಲಿಯ ಖಾನ್ ಮಾರ್ಕೆಟ್‌ನಲ್ಲಿರುವ ಸ್ಟಾರ್‌ಬಕ್ಸ್‌ಗೆ ಬಂದಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಸೋನು ಅವರ ಕಂಕುಳಲ್ಲಿ ಮಗು ಇರುವುದನ್ನು ಗಮನಿಸಿ, ಹೀಗೆಯೇ ಅವರೊಂದಿಗೆ ಮಾತುಕತೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಸಿಂಗಲ್ ಪೇರೆಂಟ್ ಆಗಿ ತನ್ನ ಎರಡು ವರ್ಷದ ಮಗಳನ್ನೂ ನೋಡಿಕೊಳ್ಳುತ್ತಾ ತನ್ನ ಕೆಲಸವನ್ನೂ ಮಾಡುತ್ತಾ ಕುಟುಂಬವನ್ನು ಸಾಗಿಸುತ್ತಿರುವ ತನ್ನ ಕಷ್ಟದ ಜೀವನದ ಬಗ್ಗೆ ಸೋನು ಅವರು ಹೇಳಿಕೊಳ್ಳುತ್ತಾರೆ.
ತನ್ನ ಮಗಳನ್ನೂ ನೋಡಿಕೊಳ್ಳುತ್ತಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿರುವ ಸೋನು ಅವರ ಸ್ಫೂರ್ತಿದಾಯಕ ಕಥೆಯನ್ನು ದೇವೇಂದ್ರ ಮೆಹ್ರಾ ಅವರು ಲಿಂಕ್ಡ್‌ಇನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಮನೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ ಕೆಲಸದ ಸಮಯದಲ್ಲಿ ತನ್ನ 2 ವರ್ಷದ ಪುಟಾಣಿ ಮಗುವನ್ನು ಕೂಡಾ ನೋಡಿಕೊಳ್ಳುತ್ತಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಮೇಲಿನ ಸಮರ್ಪಣೆ ಮತ್ತು ಮಗುವಿನ ಮೇಲಿನ ಪ್ರೀತಿ ನಿಜಕ್ಕೂ ಎಲ್ಲರಿಗೂ ಪ್ರೇರಣೆ” ಎಂಬ ಶೀರ್ಷಿಕೆಯನ್ನು ಕೂಡಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಧೂರ್ತನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 11 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋನು ಅವರ ಈ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಝೊಮಾಟೊ ಕೇರ್ ಕಾಮೆಂಟ್ ಮಾಡಿದೆ. ಒಬ್ಬ ಬಳಕೆದಾರರು ʼಕೆಲಸದ ಜೊತೆ ಜೊತೆಗೆ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಈ ತಂದೆಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ