ನೆಲಮಂಗಲದಲ್ಲಿ 8ನೇ ಶತಮಾನದ ಅಪರೂಪದ ‘ಹುಲಿ ವೀರಗಲ್ಲು’ ಶಾಸನ ಪತ್ತೆ

Updated on: Jul 25, 2026 | 10:54 AM

ನೆಲಮಂಗಲದ ಬೈರಸಂದ್ರದಲ್ಲಿ ೮ನೇ ಶತಮಾನದ ಗಂಗರ ಕಾಲದ ಅಪರೂಪದ ಶಿಲಾ ಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದೆ. ಇದು ಶಿವಮರೆನಾದಿ ಎಂಬ ವೀರ ಹುಲಿಯೊಂದಿಗೆ ಹೋರಾಡಿ ಪ್ರಾಣತ್ಯಾಗ ಮಾಡಿದ ಕತೆಯನ್ನು ಸಾರುತ್ತದೆ. ಗಂಗರ ಆಡಳಿತ, ಕನ್ನಡ ಭಾಷಾ ಬೆಳವಣಿಗೆ, ಹಾಗೂ ವೀರರ ತ್ಯಾಗ ಮನೋಭಾವಕ್ಕೆ ಸಾಕ್ಷಿಯಾಗಿರುವ ಈ ಶಾಸನ, ಇತಿಹಾಸ ತಜ್ಞರಿಂದ ಮಹತ್ವ ದೃಢಪಟ್ಟಿದೆ.

ನೆಲಮಂಗಲ, ಜು.25: ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ೮ನೇ ಶತಮಾನದ ಗಂಗರ ಕಾಲದ ಅಪರೂಪದ ಶಿಲಾ ಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದೆ. ಜಮೀನೊಂದರಲ್ಲಿ ಕೃಷಿ ಕೆಲಸ ಮಾಡುವಾಗ ಈ ಪವಿತ್ರ ಹಾಗೂ ಐತಿಹಾಸಿಕ ಪಳೆಯುಳಿಕೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ರಂಗಸ್ವಾಮಯ್ಯ ಎಂಬುವವರ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಇದನ್ನು ಪ್ರಸಿದ್ಧ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಅವರು ಪರಿಶೀಲಿಸಿ ಇದರ ಮಹತ್ವವನ್ನು ದೃಢೀಕರಿಸಿದ್ದಾರೆ. ಪತ್ತೆಯಾಗಿರುವ ಈ ವೀರಗಲ್ಲಿನಲ್ಲಿ ಗಂಗರ ಕಾಲದ ಹಳೆಯ ಕನ್ನಡ ಅಕ್ಷರಗಳಲ್ಲಿ ಸಾಲುಗಳನ್ನು ಕೆತ್ತಲಾಗಿದೆ. ಇದಕ್ಕೆ ಇತಿಹಾಸ ನಂಟಿದೆ. 8ನೇ ಶತಮಾನದಲ್ಲಿ ಗಂಗರ ಪ್ರಮುಖ ರಾಜಧಾನಿಯಾಗಿ ‘ಮಣ್ಣೆ’ (ಮಾನ್ಯಪುರ) ಮೆರೆಯುತ್ತಿತ್ತು. ತ್ತಂಣೀಯರಟ್ಟಮ್ಮರೊಡೆಯನ ಮಗನಾದ ಸಿವಮರೆನಾದಿ ಎಂಬುವವನು ಮಣ್ಣೆನಾಡಿನ ನಾಡಗೌಡನಾಗಿದ್ದ ಮಾರಮ್ಮನ ಸೇವಕನಾಗಿದ್ದನು. ಕ್ರೂರ ಹುಲಿಯೊಂದು ದಾಳಿ ಮಾಡಿದಾಗ ಸಿವಮರೆನಾದಿಯು ಜನರನ್ನು ರಕ್ಷಿಸಲು ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದನು. ವೀರಗಲ್ಲಿನಲ್ಲಿ ಕೇವಲ ಬರಹ ಮಾತ್ರವಲ್ಲದೆ, ಕಲಾತ್ಮಕವಾದ ಶಿಲ್ಪಕಲೆಯನ್ನೂ ಕೆತ್ತಲಾಗಿದೆ. ವೀರನು ತನ್ನ ಒಂದು ಕೈಯಲ್ಲಿ ಹುಲಿಯನ್ನು ಗಟ್ಟಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕತ್ತಿಯನ್ನು ಬೀಸುತ್ತಾ ಸೆಳೆದಾಡುತ್ತಿರುವ ಕಲ್ಪನಾತೀತ ದೃಶ್ಯವನ್ನಿಲ್ಲಿ ಚಿತ್ರಿಸಲಾಗಿದೆ. ನಾಡಿನ ರಕ್ಷಣೆಗೆ ಪ್ರಾಣ ತೆತ್ತ ಈ ವೀರನ ಆತ್ಮವನ್ನು ದೇವಲೋಕದ ಅಪ್ಸರೆಯರು ಗೌರವದಿಂದ ಕರೆದೊಯ್ಯುತ್ತಿರುವ ದೃಶ್ಯವನ್ನೂ ಕಲ್ಲಿನಲ್ಲಿ ಕೆತ್ತಲಾಗಿದೆ. ಈ ಶಾಸನವು ಗಂಗರ ಕಾಲದ ಆಡಳಿತ, ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಆ ಕಾಲದಲ್ಲಿದ್ದ ವೀರರ ತ್ಯಾಗ ಮನೋಭಾವಕ್ಕೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us