ಮಗು ಸೇರಿದಂತೆ ಕಂಡವರಿಗೆಲ್ಲ ಕಚ್ಚಿ ಸಾರ್ವಜನಿಕರ ಆಕ್ರೋಶಕ್ಕೆ ಬಲಿಯಾಯಿತು ಹಾಸನದ ಹುಚ್ಚು ನಾಯಿ!
ನಾಯಿಯಿಂದ ಕಚ್ಚಿಸಿಕೊಂಡವರೆಲ್ಲ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರೆಬೀಸ್ ಚುಚ್ಚುಮದ್ದು ಆಸ್ಪತ್ರೆಗಳಲ್ಲಿ ಲಭ್ಯವಿದ್ದ ಕಾರಣ ಜನರಿಗೆ ಅದರಲ್ಲೂ ವಿಶೇಷವಾಗಿ ಚಿಕ್ಕ ಮಗುವಿಗೆ ಸಮಸ್ಯೆಯಾಗಲಿಲ್ಲ.
ಹಾಸನ ನಗರದ ಕುವೆಂಪು ನಗರ ವಾರ್ಡ್ ಮತ್ತು ಕೆ ಆರ್ ಪುರಂನಲ್ಲಿ ಶನಿವಾರ ಒಂದು ಹುಚ್ಚು ನಾಯಿ ಅಕ್ಷರಶಃ ಅಟ್ಟಹಾಸ ಮೆರೆಯಿತು. ಕಚ್ಚುವುದೇ ಇಂದಿನ ನನ್ನ ಕಾಯಕ ಅನ್ನುವ ಹಾಗೆ ಈ ಎರಡು ಪ್ರದೇಶಗಳ ರಸ್ತೆಗಳಲ್ಲಿ ನಡೆದು ಹೋಗುತ್ತಿದ್ದ ಜನರ ಮೇಲೆ ಆಕ್ರಮಣ ನಡೆಸಿ ಒಂದು ಮೂರು-ವರ್ಷದ ಮಗು ಸೇರಿದಂತೆ ಒಟ್ಟು 15 ಜನರಿಗೆ ಅದು ಕಚ್ಚಿತು. ನಾಯಿಯ ಪ್ರವರ ಶುರುವಾಗಿದ್ದು ಕುವೆಂಪು ನಗರ ವಾರ್ಡ್ನಿಂದ. ಅಲ್ಲಿ ಮಗು ಸೇರಿದಂತೆ ಒಂದಷ್ಟು ಜನರನ್ನು ಕಚ್ಚಿದ ನಂತರ ಕೆ ಆರ್ ಪುರಂಗೆ ಓಡಿ ಅಲ್ಲೂ ಕೆಲವರನ್ನು ಕಚ್ಚಿತು. ಅದರ ಹುಚ್ಚಾಟಕ್ಕೆ ಮತ್ತಷ್ಟು ಜನ ಈಡಾಗುವ ಮೊದಲೇ ಸಾರ್ವಜನಿಕರು ಅದನ್ನು ಕಲ್ಲೆಸೆದು ಕೊಂದರು.
ನಾಯಿಯಿಂದ ಕಚ್ಚಿಸಿಕೊಂಡವರೆಲ್ಲ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರೆಬೀಸ್ ಚುಚ್ಚುಮದ್ದು ಆಸ್ಪತ್ರೆಗಳಲ್ಲಿ ಲಭ್ಯವಿದ್ದ ಕಾರಣ ಜನರಿಗೆ ಅದರಲ್ಲೂ ವಿಶೇಷವಾಗಿ ಚಿಕ್ಕ ಮಗುವಿಗೆ ಸಮಸ್ಯೆಯಾಗಲಿಲ್ಲ. ಆದರೆ ಮಗು ಮಾತ್ರ ಆಘಾತದಿಂದ ಚೇತರಿಸಿಕೊಂಡಿಲ್ಲ. ಆಸ್ಪ್ರತ್ರೆಗೆ ಹೋದಾಗ ಮಗುವಿನ ಮುಖದಲ್ಲಿ ಭೀತಿ ಸ್ಪಷ್ಟವಾಗಿ ಕಾಣುತ್ತಿತ್ತು. ಮಗು ಸೇರಿದಂತೆ ಯಾರಿಗೂ ಪ್ರಾಣಾಪಾಯವಾಗಿಲ್ಲ.
ನಗರದ ಹಲವಾರು ಪ್ರದೇಶಗಳಲ್ಲಿ ಬೀದಿನಾಯಿಗಳ ಉಪಟಳ ಜಾಸ್ತಿಯಾಗಿದೆ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಬೇಕು ಎಂದು ಹಾಸನದ ನಿವಾಸಿಗಳು ಪೌರಾಡಳಿತವನ್ನು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಾಸನ ನಗರಸಭೆ ಕಮೀಷನರ್, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಟೆಂಟರ್ ಪ್ರಕ್ರಿಯೆ ಮುಗಿದಿದ್ದು ಕಾರ್ಯಾದೇಶ ನೀಡುವುದು ಬಾಕಿಯಿದೆ ಎಂದು ಹೇಳಿದರಲ್ಲದೆ, ನಾಯಿಗಳಿಂದ ನಾಗರಿಕರಿಗೆ ತೊಂದರೆ ಆಗದ ಹಾಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: Viral Video: ವಧುವಿಗೆ ರೊಟ್ಟಿ ತಯಾರಿಸಲು ಸಹಾಯ ಮಾಡಿದ ವರ! ಅತಿಥಿಗಳೆಲ್ಲಾ ತಮಾಷೆ ಮಾಡಿ ನಕ್ಕ ವಿಡಿಯೋವಿದು