ಪಾಕಿಸ್ತಾನ್ ಸೋಲುತ್ತಿದ್ದಂತೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ಪಾಕ್ ಅಭಿಮಾನಿ
India vs Pakistan: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಭಾನುವಾರ (ಫೆ.23) ಪಾಕಿಸ್ತಾನ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 49.4 ಓವರ್ಗಳಲ್ಲಿ 241 ರನ್ಗಳಿಸಿ ಆಲೌಟ್ ಆಯಿತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ 46 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 56 ರನ್ ಕಲೆಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 7 ಫೋರ್ಗಳೊಂದಿಗೆ 100 ರನ್ ಬಾರಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಭಾರತ ತಂಡವು 42.3 ಎಸೆತಗಳಲ್ಲಿ 244 ರನ್ಗಳಿಸಿ 6 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಅತ್ತ ಭಾರತ ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಇತ್ತ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನ್ ಅಭಿಮಾನಿಯೊಬ್ಬ ಟೀಮ್ ಇಂಡಿಯಾ ಜೆರ್ಸಿ ಧರಿಸಿದ್ದಾರೆ. ಪಂದ್ಯದುದ್ದಕ್ಕೂ ಪಾಕ್ ಜೆರ್ಸಿಯಲ್ಲಿ ಕಾಣಿಸಿಕೊಂಡ ಪಾಕ್ ಅಭಿಮಾನಿ, ಹೀನಾಯ ಸೋಲಿನ ಸೂಚನೆ ಸಿಗುತ್ತಿದ್ದಂತೆ ಭಾರತದ ಜೆರ್ಸಿ ತೊಡುತ್ತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.