ಸಂಬಂಧದಲ್ಲಿ ಪ್ರಗತಿ ಇಲ್ಲದೆ ಹೋದರೆ ಅದು ಬಹಳ ದಿನ ಬಾಳಲಾರದು ಅಂತ ಹೇಳುತ್ತಾರೆ ಡಾ ಸೌಜನ್ಯ ವಶಿಷ್ಠ

ಸಂಬಂಧದಲ್ಲಿ ಪ್ರಗತಿ ಇಲ್ಲದೆ ಹೋದರೆ ಅದು ಬಹಳ ದಿನ ಬಾಳಲಾರದು ಅಂತ ಹೇಳುತ್ತಾರೆ ಡಾ ಸೌಜನ್ಯ ವಶಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2021 | 4:21 PM

ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಅದರೆ ಅವು ಒಬ್ಬರ ಆತ್ಮಗೌರವಕ್ಕೆ ಘಾಸಿಯನ್ನುಂಟು ಮಾಡಬಾರದು. ಸಾಮಾನ್ಯವಾಗಿ ಗಂಡು ತನ್ನ ಸಂಗಾತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಾನೆ.

ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಈ ಸಂಚಿಕೆಯಲ್ಲಿ ಸಂಬಂಧಗಳ ಕುರಿತು ಮಾತಾಡಿದ್ದಾರೆ. ಒಳ್ಳೆಯ ಸಂಬಂಧ, ಕೆಟ್ಟ ಸಂಬಂಧ, ಸಂಬಂಧಗಳಲ್ಲಿ ಪ್ರಗತಿ, ಸಂಬಂಧಗಳು ಅಸಹನೀಯ ಆಗೋದು, ಸಂಬಂಧಗಳಲ್ಲಿ ದೈಹಿಕ ಹಲ್ಲೆ ಮೊದಲಾದವುಗಳನ್ನು ಅವರು ಸರಳವಾಗಿ ವಿವರಿಸಿದ್ದಾರೆ. ಸಂಬಂಧಗಳೆಲ್ಲ ಒಳ್ಳೆಯವು ಅಥವಾ ಕೆಟ್ಟವು ಅಂತ ಹೇಳಲಾಗದು-ಒಳ್ಳೆಯವೂ ಇರುತ್ತವೆ ಜೊತೆಗೆ ಕೆಟ್ಟವು ಕೂಡ. ಸಂಗಾತಿಗಳ ನಡುವಿನ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಮತ್ತು ಗೌರವ ಬಹಳ ಮುಖ್ಯವಾಗಿರುತ್ತವೆ. ಈ ಮೂರು ಜೊತೆಜೊತೆಯಾಗಿ ಸಾಗಿದಾಗ ಮಾತ್ರ ಸಂಬಂಧ ಸಂತೋಷಕರ, ಸಹನೀಯವಾಗಿದ್ದು ಅದು ಬೆಳವಣಿಗೆ ಕಾಣುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ಸಂಗಾತಿಗಳ ನಡುವೆ ಸಂಬಂಧ ಹದಗೆಟ್ಟಾಗ ಅದರಲ್ಲಿ ಮುಂದುವರಿಯಬಾರದು ಎನ್ನುವ ಸಲಹೆಯನ್ನು ಸೌಜನ್ಯ ನೀಡುತ್ತಾರೆ. ಕೋ ಡಿಪೆಂಡೆಂಟ್ ರಿಲೇಶನ್​​ಶಿಪ್​​​ನಲ್ಲಿ ಸಾಮಾನ್ಯವಾಗಿ ಒಬ್ಬ ಮಹಿಳೆಯು ತನ್ನ ಸಂಗಾತಿಯ ಗಮನವೆಲ್ಲ ತನ್ನ ಮೇಲೆ ಇರಬೇಕು ಅಂತ ಬಯಸುತ್ತಾಳೆ. ಬಾಲ್ಯ ಮತ್ತು ಬೆಳವಣಿಗೆಯ ಹಂತದಲ್ಲಿ ಅನುಭವಿಸಿದ ನೋವು, ಮಾನಸಿಕ ಯಾತನೆ, ಕೆಲವು ಅಹಿತಕಕರ ಘಟನೆ ಆಕೆಯ ಮೇಲೆ ಗಾಢವಾದ ಪರಿಣಾಮ ಬೀರಿರುತ್ತವೆ.

ಪೋಷಕರು ಮತ್ತು ಒಡಹುಟ್ಟಿದವರಿಂದ ಸಿಗದ ಪ್ರೀತಿಯನ್ನು ಆಕೆ ಸಂಗಾತಿಯಲ್ಲಿ ಕಾಣಲು ತವಕಿಸುತ್ತಾಳೆ. ಆ ಸೂಕ್ಷ್ಮತೆಯನ್ನು ಆಕೆಯ ಸಂಗಾತಿ ಅರ್ಥಮಾಡಿಕೊಳ್ಳಬೇಕು ಎಂದು ಸೌಜನ್ಯ ಹೇಳುತ್ತಾರೆ.

ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಅದರೆ ಅವು ಒಬ್ಬರ ಆತ್ಮಗೌರವಕ್ಕೆ ಘಾಸಿಯನ್ನುಂಟು ಮಾಡಬಾರದು. ಸಾಮಾನ್ಯವಾಗಿ ಗಂಡು ತನ್ನ ಸಂಗಾತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಾನೆ. ಅದು ಸರಿಯಲ್ಲ. ಆಕೆಗೆ ಸ್ಪೇಸ್ ನೀಡಬೇಕು, ಆಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು.

ಸ್ವಾತಂತ್ರ್ಯವೇ ಬೇರೆ, ಸ್ವಚ್ಛಂದೆಯೇ ಬೇರೆ ಅನ್ನೋದನ್ನು ಹೆಣ್ಣು ಸಂಗಾತಿಯೂ ಆರ್ಥ ಮಾಡಿಕೊಳ್ಳಬೇಕು. ಎಲ್ಲೆ ಮೀರಿದರೆ ಸಂಬಂಧ ಹಾಳಾಗಲು ತಡ ಹಿಡಿಯುವುದಿಲ್ಲ. ಹಾಗೇಯೇ, ಸಂಬಂಧಗಳಲ್ಲಿ ದೈಹಿಕ ಹಲ್ಲೆಗೆ ಅವಕಾಶವೇ ಇಲ್ಲ. ಸಂಗಾತಿಯನ್ನು ಹೊಡೆದು ಬಡಿದು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಗಂಡು ಮಾಡಿದರೆ, ಹೆಣ್ಣು ಒಂದೆರಡು ಬಾರಿ ಕ್ಷಮಿಸಿದ ಬಳಿಕ ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:   Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ