Video: ತನ್ನ ಮದುವೆಯಲ್ಲಿ ಹುತಾತ್ಮ ಯೋಧರ ಪತ್ನಿಯರಿಗೆ, ಗಾಯಾಳು ಯೋಧರಿಗೆ ಸನ್ಮಾನ ಮಾಡಿ ಸೈ ಅನ್ನಿಸಿಕೊಂಡ ಯೋಧ

| Updated By: ಸಾಧು ಶ್ರೀನಾಥ್​

Updated on: Dec 14, 2023 | 4:02 PM

ಸಂತೋಷ ಬಾವಿಕಟ್ಟಿ ಕಳೆದ ಎಂಟು ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎ ಎಸ್ ಸಿ ರೆಜಿಮೆಂಟ್ ಮೂಲಕ ಸದ್ಯ ಅರುಣಾಚಲ ಪ್ರದೇಶದಲ್ಲಿ ಸೇವೆ ಮುಂದುವರೆದಿದೆ. ಸಂತೋಷ ಅವರು ದೇಶ ರಕ್ಷಣೆ ಜೊತೆಗೆ ರೀಲ್ಸ್ ಮಾಡುವ ಮೂಲಕ ದೇಶಭಕ್ತಿ, ಸಾಮಾಜಿಕ ಕಳಕಳಿ ಸಂದೇಶ ಸಾರುತ್ತಾರೆ.

ಆತ ಓರ್ವ ದೇಶ ಕಾಯುವ ಯೋಧ. ದೇಶ ರಕ್ಷಣೆ ಜೊತೆಗೆ ದೇಶ ಭಕ್ತಿ, ಸಾಮಾಜಿಕ ಕಳಕಳಿ ಸಂದೇಶ ಸಾರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಆ ಯೋಧ ಇಂದು ಮದುವೆಯಾಗಿದ್ದು ಮದುವೆಯಲ್ಲೂ ವಿಶೇಷತೆ ಮೆರೆದಿದ್ದಾರೆ. ಹುತಾತ್ಮ ಯೋಧರ ಪತ್ನಿಯರಿಗೆ, ಕಾರ್ಗಿಲ್ ಯೋಧರಿಗೆ ಸನ್ಮಾನ ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾನೆ. ಕಾರ್ಗಿಲ್ ಯುದ್ದದಲ್ಲಿ ವೀರೋಚಿತ ಹೋರಾಟ ಮಾಡಿ ಬದುಕಿರುವ ಯೋಧ, ಪುಲ್ವಾಮಾ, ಸಿಯಾಚಿನ್ ಸೇರಿದಂತೆ ವಿವಿಧ ಕಡೆಯಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರು. ಅವರೆಲ್ಲರಿಗೂ ಮಾಜಿ ಯೋಧರಿಂದ ಸನ್ಮಾನ. ಭಾರತ ಮಾತಾಕಿ ಜೈ, ಒಂದೇ ಮಾತರಂ, ಜೈ ಇಂಡಿಯನ್ ಆರ್ಮಿ, ಜೈ ಜವಾನ್ ಎಂಬ ಘೋಷಣೆ. ಅಂದ ಹಾಗೆ ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣ ಸಿದ್ದೇಶ್ವರ ದೇವಸ್ಥಾನದ ಮದುವೆ ಮಂಟಪದಲ್ಲಿ.

ಮದುವೆ ಮಂಟಪದಲ್ಲಿ ಇದೆಲ್ಲ ಏನು ನಡೆಯುತ್ತಿದೆ ಅಂತ ಅನ್ನಿಸಬಹುದು. ಇದಕ್ಕೆಲ್ಲ ಕಾರಣ ಇಲ್ಲಿ ಮದುವೆ ಆಗುತ್ತಿರೋದು ಭಾರತೀಯ ಸೇನಾ ಯೋಧ ಸಂತೋಷ ಬಾವಿಕಟ್ಟಿ. ಬೀಳಗಿ ಮೂಲದ ಸಂತೋಷ ಬಾವಿಕಟ್ಟಿ ಭಾರತೀಯ ಸೇನಾಯೋಧನಾಗಿದ್ದು, ಇಂದು ಶೃತಿ ಎಂಬುವರ ಜೊತೆ ಹಸೆ ಮಣೆ ಏರಿದ್ದಾರೆ. ಒಬ್ಬ ಯೋಧನಾಗಿ ವಿಶೇಷವಾಗಿ ಮದುವೆಯಾಗಬೇಕು, ಅದು ಹುತಾತ್ಮ ಯೋಧರ ಪತ್ನಿಯರು, ಕಾರ್ಗಿಲ್ ಯುದ್ದದಲ್ಲಿ ವೀರಯುದ್ದ ಮಾಡಿ ಬದುಕಿದ ವೀರಯೋಧರಿಗೆ ಸನ್ಮಾನ ಮಾಡಬೇಕು. ಮಾಜಿ ಯೋಧರಿಂದ ಅವರೆಲ್ಲರಿಗೂ ಸನ್ಮಾನ ಮಾಡಿ ಎಲ್ಲ ಸೈನಿಕ ಕುಟುಂಬದ ಆಶೀರ್ವಾದ ಪಡೆಯಬೇಕು ಎಂಬುದು ಇವರ ಕನಸಾಗಿತ್ತು.

ಆ ಪ್ರಕಾರ ಬೀಳಗಿ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶೃತಿ ಎಂಬುವರ ಜೊತೆ ಎಲ್ಲರ ಆಶೀರ್ವಾದ ಪಡೆದು ನವಜೀವನಕ್ಕೆ ಕಾಲಿಟ್ಟಿದ್ದಾರೆ. ಹುತಾತ್ಮ ಯೋಧರ ಪತ್ನಿಯರು ಕೂಡ ವೀರನಾರಿಯರು, ಕಾರ್ಗಿಲ್ ಗಾಯಾಳು ಯೋಧ, ಮಾಜಿ ಯೋಧರು ಎಲ್ಲರೂ ಬಂದಿದ್ದು ಬಹಳ ಸಂತಸ ತಂದಿದೆ, ನನ್ನ ಕನಸು ಈಡೇರಿದೆ ಎಂದು ಸಂತೋಷ ಅವರು ಖುಷಿ ಪಟ್ಟರು.

Also Read: ಬೀಳಗಿ ದೇವಸ್ಥಾನದಲ್ಲಿ ಇಂದು ಯೋಧ ಸಂತೋಷ ಬಾವಿಕಟ್ಟಿ ವಿಭಿನ್ನ ಮದುವೆ, ಯಾರೆಲ್ಲ ಬರುತ್ತಿದ್ದಾರೆ ಗೊತ್ತಾ?

ಸಂತೋಷ ಬಾವಿಕಟ್ಟಿ ಕಳೆದ ಎಂಟು ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎ ಎಸ್ ಸಿ ರೆಜಿಮೆಂಟ್ ಮೂಲಕ ಸದ್ಯ ಅರುಣಾಚಲ ಪ್ರದೇಶದಲ್ಲಿ ಸೇವೆ ಮುಂದುವರೆದಿದೆ. ಸಂತೋಷ ಅವರು ದೇಶ ರಕ್ಷಣೆ ಜೊತೆಗೆ ರೀಲ್ಸ್ ಮಾಡುವ ಮೂಲಕ ದೇಶಭಕ್ತಿ, ಸಾಮಾಜಿಕ ಕಳಕಳಿ ಸಂದೇಶ ಸಾರುತ್ತಾರೆ. ಇದರಿಂದ ಸಾಮಾಜಿಕ ಜಾಲತಾಣದಲ್ಲೂ ಅವರ ಫಾಲೋವರ್ಸ್ ಹೆಚ್ಚಿದ್ದಾರೆ.

ಕೋರೆ ಮೀಸೆಯ ಈ ಯೋಧ ತನ್ನ ಮಾತುಗಳಿಂದ ಬಾರಿ ಫೇಮಸ್. ಈಗ ತನ್ನ ಮದುವೆ ಕನಸಿನಂತೆ ಸಿಯಾಚಿನ್ ಹುತಾತ್ಮ ಹನುಮಂತ ಕೊಪ್ಪದ ಪತ್ನಿ ಮಾದೇವಿ ಕೊಪ್ಪದ, ಪುಲ್ವಾಮಾ ಹುತಾತ್ಮ ವಿಜಯಪುರ ಮೂಲದ ಕಾಶಿರಾಯ್ ಪತ್ನಿ ಸಂಗೀತಾ, ೨೦೦೫ ರಲ್ಲಿ ಉಗ್ರರ ಗುಂಡಿಗೆ ಜಮ್ಮುವಿನಲ್ಲಿ ಹುತಾತ್ಮನಾದ ಬೆಳಗಾವಿ ಮೂಲದ ಯೋಧ ಕಲ್ಲಪ್ಪ ಪತ್ನಿ ರೇಖಾ, ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ಬದುಕುಳಿದ ಬಾಗಲಕೋಟೆಯ ಹುಲಸಗೇರಿ ಗ್ರಾಮದ ರಂಗಪ್ಪ ಆಲೂರ, ಸೇರಿದಂತೆ ಹುತಾತ್ಮ ಯೋಧರ ಪತ್ನಿಯರು ಸೇರಿ ಎಂಟು ಜನ ವೀರನಾರಿಯರು ಕಾರ್ಗಿಲ್ ಗಾಯಾಳುಗಳಿಗೆ ಮಾಜಿ ಯೋಧರಿಂದ ಸನ್ಮಾನ ಮಾಡಲಾಯಿತು.

ನಂತರ ಎಲ್ಲ ಮಾಜಿ ಯೋಧರು ನವದಂಪತಿಗಳಿಗೆ ಸನ್ಮಾನಿಸಿ ಆಶೀರ್ವದಿಸಿದರು. ಕುಟುಂಬಸ್ಥರು, ಆಪ್ತರು ಅಕ್ಷತೆ ಹಾಕಿದರು. ನಮ್ಮನ್ನು ಕೇವಲ ಅಗಷ್ಟ್ ೧೫, ಜನವರಿ ೨೬ ರಂದು ಮಾತ್ರ ನೆನಪು ಮಾಡಿಕೊಳ್ತಾರೆ. ಆದರೆ ಸಂತೋಷ ಬಾವಿಕಟ್ಟಿ ಮದುವೆ ಸಂಭ್ರಮದಲ್ಲಿ, ಸಂತೋಷದ ಸಮಯದಲ್ಲಿ ಕರೆದು ಗೌರವಿಸಿದ್ದು ಬಹಳ ಖುಷಿ ತಂದಿದೆ. ಅವರು ಸೇನಾವೃತ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ, ಅವರ ದಾಂಪತ್ಯ ಜೀವನ ಸದಾ ಸುಖವಾಗಿರಲಿ ಎಂದು ಹರಸಿದರು.

ಒಟ್ಟಿನಲ್ಲಿ ಓರ್ವ ಯೋಧ, ಹುತಾತ್ಮ ಯೋಧರ ಪತ್ನಿಯರು, ವೀರ ಯೋಧರ ಕರೆಸಿ ಸನ್ಮಾನಿಸುವ ಮೂಲಕ ಮದುವೆಯಲ್ಲೂ ವಿಶೇಷತೆ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ