ತಾಲಿಬಾನಿಗಳಿಗೆ ಕುಮ್ಮಕ್ಕು ನೀಡುವುದು ನಿಲ್ಲಿಸಿ, ದೇವರು ತನಗೆ ಮಾತ್ರ ಸೇರಿದ್ದೆಂಬ ಧೋರಣೆ ಬಿಡುವಂತೆ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ಎಚ್ಚರಿಕೆ

ತಾಲಿಬಾನಿಗಳಿಗೆ ಕುಮ್ಮಕ್ಕು ನೀಡುವುದು ನಿಲ್ಲಿಸಿ, ದೇವರು ತನಗೆ ಮಾತ್ರ ಸೇರಿದ್ದೆಂಬ ಧೋರಣೆ ಬಿಡುವಂತೆ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ಎಚ್ಚರಿಕೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 03, 2021 | 9:37 PM

ರವಿವಾರದಂದು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಅವರು ತಮ್ಮ ದೇಶದೊಂದಿಗೆ ನಿರಂತರವಾಗಿ ಯುದ್ಧನಿರತವಾಗಿರುವ ತಾಲಿಬಾನಿಗಳಿಗೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಮತ್ತು ಅವರಿಗೆ ಹಣಕಾಸಿನ ನೆರವು ಸಹ ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಊರೆಲ್ಲ ಉಗಿದ್ರೂ ಸೇರಾಗ್ಲಿಲ್ಲ ಅಂತ ಉತ್ತರ ಕರ್ನಾಟಕದಲ್ಲಿ ಹೇಳುವ ಮಾತಿದೆ. ಪೂರ್ತಿಯಾಗಿ ಲಜ್ಜೆಗೆಟ್ಟವನನ್ನು (ಮಾನಗೇಡಿ, ಬೇಷರಮ್) ಉಲ್ಲೇಖಿಸಬೇಕಾದರೆ ಹಾಗೆ ಹೇಳುವುದುಂಟು. ಈ ಮಾತು ಪಾಕಿಸ್ತಾನಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ನಮ್ಮೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಲು ಅದಕ್ಕೆ ಸಾಧ್ಯವಾಗಲೇ ಇಲ್ಲ. ಇಮ್ರಾನ್ ಖಾನ್ ಕ್ರೀಡೆಯ ಹಿನ್ನೆಲೆಯಿಂದ ಬಂದಿರುವುದರಿಂದ ಅವರು ಪಾಕಿಸ್ತಾನದ ಪ್ರಧಾನಿಯಾದ ನಂತರ ಪರಿಸ್ಥಿತಿ ಸುಧಾರಿಸಬಹುದೆಂದು ಎಣಿಸಲಾಗಿತ್ತು. ಊಹುಂ, ಅದೂ ಕೂಡ ಹುಸಿಹೋಯಿತು. ಪಾಕಿಸ್ತಾನವನ್ನು ಭಾರತ ಯಾಕೆ ಖಂಡಿಸುತ್ತದೆ, ಟೀಕಿಸುತ್ತದೆ ಅನ್ನೋದು ಜಗತ್ತಿಗೆ ಗೊತ್ತಿರುವ ವಿಷಯ. ಬೇರೆ ರಾಷ್ಟ್ರಗಳು ಸಹ ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವುದನ್ನು ಖಂಡಿಸುತ್ತಿವೆ.

ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಮುಸ್ಲಿಂ ರಾಷ್ಟ್ರಗಳು ಸಹ ಪಾಕಿಸ್ತಾನವನ್ನು ದ್ವೇಷಿಸಲಾರಂಭಿಸಿವೆ ಮತ್ತು ಹದ್ದುಬಸ್ತಿನಲ್ಲಿರುವಂತೆ ಎಚ್ಚರಿಸುತ್ತಿವೆ. ರವಿವಾರದಂದು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಅವರು ತಮ್ಮ ದೇಶದೊಂದಿಗೆ ನಿರಂತರವಾಗಿ ಯುದ್ಧನಿರತವಾಗಿರುವ ತಾಲಿಬಾನಿಗಳಿಗೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಮತ್ತು ಅವರಿಗೆ ಹಣಕಾಸಿನ ನೆರವು ಸಹ ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ನ್ಯಾಟೊ ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡುತ್ತಿವೆ, ಆದರೆ ಈ ದೇಶಗಳು ತಮಗೆ ಪೂರೈಸುವ ಆಯುಧಗಳಿಗೆ ಸಮನಾದ ಶಸ್ತ್ರಾಸ್ತ್ರಗಳು ತಾಲಿಬಾನಿಗಳಿಗೆ ಹೇಗೆ ಸಿಗುತ್ತಿವೆ? ನಮ್ಮ ಪಕ್ಕದ ರಾಷ್ಟ್ರ ಇಂಥ ಹೀನ ಕೃತ್ಯ ನಡೆಸುವುದು ಕೂಡಲೇ ನಿಲ್ಲಸಬೇಕು. ಜೇಡವನ್ನು ಜೇಡವೆಂದೇ ಕರೆಯಲು ತಮಗೇನೂ ಹಿಂಜರಿಕೆ ಇಲ್ಲ ಎಂದು ಸಾಲೆಹ್ ಹೇಳಿದ್ದಾರೆ.

ದೇವರು, ಜಿಹಾದ್ ಎಲ್ಲ ತನಗೆ ಮಾತ್ರ ಸೇರಿದ್ದು ಎನ್ನುವ ಧೋರಣೆಯನ್ನು ಪಾಕಿಸ್ತಾನ ಆದಷ್ಟು ಬೇಗ ತ್ಯಜಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!