ಕರ್ನಾಟಕದ ಬಳಿಕ ಅಹಮದಾಬಾದ್ ಶಾಲೆಯಲ್ಲೂ 3ನೇ ಕ್ಲಾಸ್ ಬಾಲಕಿಗೆ ಹೃದಯಾಘಾತ
ಗುಜರಾತ್‌ನ ಅಹಮದಾಬಾದ್ನ ಥಲ್ತೇಜ್ ಪ್ರದೇಶದಲ್ಲಿರುವ ಜೆಬಾರ್ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗಾರ್ಗಿ ರಣಪರಾ ಎಂಬ 8 ವರ್ಷದ ಬಾಲಕಿ ಕುಸಿದು ಬಿದ್ದಿದ್ದಾಳೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಬಾಲಕಿ ಶುಕ್ರವಾರ ಸಾವನ್ನಪ್ಪಿದ್ದಾಳೆ. ಶಾಲೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಶಾಲೆಯ ಕಾರಿಡಾರ್ನಲ್ಲೇ ಬಾಲಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ನ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಯ ಕಾರಿಡಾರ್ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ. ಗಾರ್ಗಿ ರಣಪರಾ ಎಂಬ 8 ವರ್ಷದ ಬಾಲಕಿ ನಿನ್ನೆ ಬೆಳಿಗ್ಗೆ ಥಲ್ತೇಜ್ ಪ್ರದೇಶದಲ್ಲಿರುವ ಜೆಬಾರ್ ಶಾಲೆಯಲ್ಲಿ ಕುಸಿದು ಬಿದ್ದಿದ್ದಾಳೆ. ಕ್ಲಾಸ್ರೂಮಿನ ಹೊರಗಿದ್ದ ಕಾರಿಡಾರ್ನಲ್ಲೇ ಬಾಲಕಿ ಕುಸಿದುಬಿದ್ದಿದ್ದಾಳೆ. ತಕ್ಷಣ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅವಳು ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.
ಶಾಲಾ ಆಡಳಿತ ಮಂಡಳಿ ಹಂಚಿಕೊಂಡ ಸಿಸಿಟಿವಿ ವೀಡಿಯೊದಲ್ಲಿ, ಗಾರ್ಗಿ ರಣಪರಾ ಲಾಬಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆದರೆ ದಾರಿಯಲ್ಲಿ, ಅವಳು ಸುಸ್ತಾಗಿ ಲಾಬಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆ ಆಕೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಅವಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರಿಂದ ಶಿಕ್ಷಕರು ಅವಳಿಗೆ ಸಿಪಿಆರ್ ನೀಡಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಈ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆ ಕರ್ನಾಟಕದ ಚಾಮರಾಜನಗರದಲ್ಲಿ ನಡೆದಿತ್ತು. ಇಲ್ಲಿನ 8 ವರ್ಷದ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಅದೇ ರೀತಿಯ ಘಟನೆ ಅಹಮದಾಬಾದ್ ಶಾಲೆಯಲ್ಲಿ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ