ಸಿದ್ದರಾಮಯ್ಯರನ್ನೇ 5 ವರ್ಷ ಸಿಎಂ ಎಂದು ಘೋಷಿಸಿ: ಅಹಿಂದ ಸಂಘಟನೆಗಳಿಂದ ರಾಹುಲ್ ಗಾಂಧಿಗೆ ಪತ್ರ ಅಭಿಯಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಸಲು ಅಹಿಂದ ಸಂಘಟನೆಗಳು ಪತ್ರ ಚಳವಳಿ ಆರಂಭಿಸಿವೆ. ಮೈಸೂರಿನ ರಾಮಸ್ವಾಮಿ ವೃತ್ತದಿಂದ ರಾಹುಲ್ ಗಾಂಧಿಗೆ ಪತ್ರ ಬರೆಯುವ ಅಭಿಯಾನ ಆರಂಭವಾಗುತ್ತಿದ್ದು, ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಸಿದ್ದರಾಮಯ್ಯ ಆಡಳಿತ ಮುಂದುವರಿಸಲು ಸಂಘಟನೆಗಳು ಒತ್ತಾಯಿಸಲಿವೆ.
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂದು ಅಹಿಂದ ಸಂಘಟನೆಗಳು ಪತ್ರ ಚಳವಳಿಯನ್ನು ಆರಂಭಿಸಲು ಮುಂದಾಗಿವೆ. ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಈ ಚಳವಳಿ ಪ್ರಾರಂಭವಾಗಲಿದೆ. ಹೈಕಮಾಂಡ್ ಹೇಳಿದರೆ 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಅಹಿಂದ ಸಂಘಟನೆಗಳು ಜಾಗೃತಗೊಂಡಿವೆ. ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಅಭಿಯಾನ ಆರಂಭಿಸಲು ಮುಂದಾಗಿವೆ. ರಾಹುಲ್ ಗಾಂಧಿಗೆ ಪತ್ರ ಬರೆಯುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಮುಂದಾಗಿವೆ. ಅಹಿಂದ ಸಘಟನೆಗಳು ಪತ್ರಗಳಲ್ಲಿ, ಸಿದ್ದರಾಮಯ್ಯ ಅವರ ಆಡಳಿತವನ್ನು ಮುಂದುವರಿಸಲು ಅವಕಾಶ ನೀಡುವಂತೆ ಮತ್ತು ನಾಯಕತ್ವ ಬದಲಾವಣೆ ಮಾಡದಂತೆ ಮನವಿ ಮಾಡಲಿವೆ.
