ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವರೇ? ಗೊತ್ತಿಲ್ಲವೆಂದರು ಜಿ ಪರಮೇಶ್ವರ್

|

Updated on: Jan 13, 2024 | 12:02 PM

ಪ್ರಿಯಾಂಕಾ ಗಾಂಧಿ ಒಂದು ಪಕ್ಷ ಕರ್ನಾಟಕದಿಂದ ಸ್ಪರ್ಧಿಸಿದ್ದೇಯಾದರೆ, ಹಾಗೆ ಮಾಡಿದ ನೆಹರೂ ಮನೆತನದ ಮೂರನೇ ಮಹಿಳೆಯೆನಿಸಿಕೊಳ್ಳಲಿದ್ದಾರೆ. 1978 ರಲ್ಲಿ ದಿವಂಗತ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ದಿವಂಗತ ವೀರೇಂದ್ರ ಪಾಟೀಲ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ನಂತರ ಸೋನಿಯಾ ಗಾಂಧಿ 1999 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ದಿವಂಗತ ಸುಷ್ಮಾ ಸ್ವರಾಜ್ ವಿರುದ್ಧ ಗೆದ್ದು ಸಂಸತ್ತಿಗೆ ಆಯ್ಕೆಯಾಗಿದ್ದರು.

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ  (Priyanka Gandhi Vadra) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆಯೇ? ತನಗೆ ಗೊತ್ತಿಲ್ಲ, ಅಂಥ ಸಾಧ್ಯತೆಯೇನಾದರೂ ಇದ್ದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಎಲ್ಲಿರಿಗಿಂತ ಮೊದಲು ಗೊತ್ತಾಗುತ್ತದೆ, ಹಾಗಾಗಿ ವಿಷಯದ ಮೇಲೆ ಅವರೇ ಬೆಳಕು ಚೆಲ್ಲಬಲ್ಲರು ಎಂದು ನಗರದಲ್ಲಿಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿದರು. ಎರಡು ದಿನಗಳ ಹಿಂದೆ ಸಿದ್ದರಾಮಯ್ಯ ಸಂಪುಟದ ಸಚಿವರನ್ನು ಎಐಸಿಸಿ ದೆಹಲಿಗೆ ಕರೆಸಿತ್ತು. ಆ ಸಂದರ್ಭದಲ್ಲೇ ಪ್ರಿಯಾಂಕಾರನ್ನು ಕರ್ನಾಟಕದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಅನುಭವಿ ರಾಜಕಾರಣಿಯಾಗಿರುವ ಪರಮೇಶ್ವರ್ ಪಕ್ಷದ ಆಂತರಿಕ ವಿಷಯಗಳನ್ನು ಹೇಗೆ ಬಹಿರಂಗಗೊಳಸಿಯಾರು?

ಮುದ್ದುಹನುಮೇಗೌಡ ಯಾವಾಗ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೂ ಪರಮೇಶ್ವರ್ ಸ್ಪಷ್ಟ ಉತ್ತರ ನೀಡಲಿಲ್ಲ. ಹನುಮೇಗೌಡರಿಗೆ ಪಕ್ಷ ಸೇರುವ ಇಚ್ಛೆಯಿದೆ, ಅವರನ್ನು ಸೇರಿಸಿಕೊಳ್ಳುವುದು ಬಿಡೋದು ಕೆಪಿಸಿಸಿ ಮತ್ತು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ